ಮೈಕಲ್ ಡಿ’ಸೋಜಾ ವಿಶನ್ 2030 ಕಾರ್ಯಯೋಜನೆಗೆ ಚಾಲನೆ

ಮಂಗಳೂರು, ಡಿಸೆಂಬರ್ 16, 2025 – ಪ್ರಸಿದ್ಧ ಅನಿವಾಸಿ ಉದ್ಯಮಿ ಮತ್ತು ಮಹಾದಾನಿ ಶ್ರೀ ಮೈಕಲ್ ಡಿ’ಸೋಜಾ ಅವರ ಕಾರವಾರ ಮತ್ತು ಗುಲ್ಬರ್ಗಾ ಜೋಡಿ ಧರ್ಮಪ್ರಾಂತ್ಯಗಳ ಸಮುದಾಯಗಳನ್ನು ಸಮರ್ಥಗೊಳಿಸುವ ಗುರಿಯುಳ್ಳ ಮಹತ್ವಾಕಾಂಕ್ಷಿ ವಿಶನ್ 2030 ಕಾರ್ಯಯೋಜನೆಗೆ ಮಂಗಳೂರು ಧರ್ಮಕ್ಷೇತ್ರದ, ಧರ್ಮಾಧ್ಯಕ್ಷರ ನಿವಾಸದಲ್ಲಿ ತಿಳುವಳಿಕೆ ಒಡಂಬಡಿಕೆಗೆ (MoU) ಸಹಿ ಮಾಡುವುದರ ಮೂಲಕ ಅಧಿಕೃತವಾಗಿ ಚಾಲನೆ ನೀಡಲಾಯಿತು. ಕಾರವಾರ ಮತ್ತು ಗುಲ್ಬರ್ಗಾ ಧರ್ಮಕ್ಷೇತ್ರಗಳಿಗಾಗಿ ಮೈಕಲ್ ಡಿ’ ಸೊಜಾ ವಿಶನ್ 2030 ಕಾರ್ಯಯೋಜನೆ ವಸತಿ ಮತ್ತು ಶಿಕ್ಷಣ ಕಾರ್ಯಕ್ರಮಗಳ ಮೂಲಕ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಮಂಗಳೂರಿನ ಬಿಷಪ್ ವಂದನೀಯ ಡಾ| ಪೀಟರ್ ಪೌಲ್ ಸಲ್ದಾನ್ಹ ಮತ್ತು ಉಡುಪಿಯ ಬಿಷಪ್ ವಂದನೀಯ ಡಾ| ಜೆರಾಲ್ಡ್ ಐಸಾಕ್ ಲೋಬೋ ಉಪಸ್ಥಿತರಿದ್ದರು.

“ಪ್ರತಿಯೊಬ್ಬ ಮಾನವನಿಗೂ ವಸತಿ ಮತ್ತು ಶಿಕ್ಷಣವು ಮೂಲಭೂತ ಅಗತ್ಯಗಳು. ತಲೆ ಮೇಲೊಂದು ಸುರಕ್ಷಿತ ಸೂರು ಇಲ್ಲದೆ ನಿರಂತರ ಅನಿಶ್ಚಿತತೆಯಲ್ಲಿ ಬದುಕುವುದು ಮತ್ತು ಉನ್ನತ ಶಿಕ್ಷಣದ ಕೊರತೆಯಿಂದ ಘನತೆಯಿಂದ ಕೂಡಿದ ಜೀವನ ಸಾಗಿಸಲು ಕಷ್ಟಪಡುವುದು ಸಮುದಾಯ ಅಭಿವೃದ್ಧಿಯ ಪಥದಲ್ಲಿ ತೊಡಕುಗಳಾಗಿವೆ ” ಎಂದು ಶ್ರೀ ಡಿ’ಸೋಜಾ ಹೇಳಿದರು. “ದೇವರು ನನ್ನ ಕುಟುಂಬಕ್ಕೆ ಮತ್ತು ನನಗೆ ಅಗತ್ಯಕ್ಕಿಂತ ಹೆಚ್ಚು ಆಶೀರ್ವದಿಸಿದ್ದಾರೆ, ಮತ್ತು ನಮ್ಮ ಸಹೋದರರೊಂದಿಗೆ ಹಂಚಿಕೊಳ್ಳಲು ಪ್ರಾರಂಭಿಸಿದಾಗ ನಮಗೆ ಇನ್ನಷ್ಟು ಆಶೀರ್ವಾದ ಸಿಕ್ಕಿದೆ.” ಎಂದು ಅವರು ಮಾರ್ಮಿಕವಾಗಿ ನುಡಿದರು.

ಶ್ರೀ ಡಿ’ಸೋಜಾ ಅವರು ದಾನಧರ್ಮಕ್ಕೆ ಘನತೆಯುಕ್ತ ವಿಧಾನವನ್ನು ಒತ್ತಿ ಹೇಳಿದರು: “ದಾನಧರ್ಮವು ಫಲಾನುಭವಿಗಳಿಗೆ ಘನತೆಯನ್ನು ಮರಳಿ ನೀಡುವ ಗುರಿಯನ್ನು ಹೊಂದಿರಬೇಕು. ಸಮುದಾಯಗಳನ್ನು ಸಬಲೀಕರಣಗೊಳಿಸಲು ಶಿಕ್ಷಣವು ಅತ್ಯುತ್ತಮ ಮಾರ್ಗ. ಧರ್ಮಸಭೆಗಳು ಇದರಲ್ಲಿ ಪ್ರಮುಖ ಪಾತ್ರ ವಹಿಸಬಲ್ಲ ಅತ್ಯಂತ ವಿಶ್ವಾಸಾರ್ಹ ಮತ್ತು ಸಮಯ ಪರೀಕ್ಷಿತ ಮಾದರಿಗಳಾಗಿವೆ. 2013ರಿಂದ ಮಂಗಳೂರು ಮತ್ತು ಉಡುಪಿ ಧರ್ಮಪ್ರಾಂತ್ಯಗಳು ಸಮಗ್ರ ಯೋಜನೆಗಳನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಿದ್ದು, ಗುಲ್ಬರ್ಗಾ ಮತ್ತು ಕಾರವಾರ ಬಿಷಪ್‌ರ ದೂರದೃಷ್ಟಿ ನಾಯಕತ್ವದಡಿ ಕಾರ್ಯಯೋಜನೆ ವಿಶನ್ 2030 ತಯಾರಿಸಲಾಗಿದೆ. ವ್ಯಕ್ತಿಗಳು ಬಂದು ಹೋಗಬಹುದು, ಆದರೆ ಸಂಸ್ಥೆ ಮತ್ತು ಅದರ ದೂರದೃಷ್ಟಿತ್ವ ಶಾಶ್ವತವಾಗಿರುತ್ತದೆ.”

ಮೈಕಲ್ ಡಿ ಸೊಜಾ ಕುಟುಂಬ ಪ್ರೇರಿತ ಶಿಕ್ಷಣ, ಆರೋಗ್ಯ, ವಸತಿ ಮತ್ತು ಸ್ವಸಹಾಯ ಗುಂಪು ಮಾದರಿ ಯೋಜನೆಗಳು 2013ರಿಂದ ಮಂಗಳೂರು ಮತ್ತು ಉಡುಪಿ ಧರ್ಮಕ್ಷೇತ್ರಗಳಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿದ್ದು ಅದರ ಯಶಸ್ಸಿನ ಮೇಲೆ ವಿಶನ್ 2030 ನಿರ್ಮಿತವಾಗಿದ್ದು, ದೀರ್ಘಕಾಲೀನ ಸಮುದಾಯ ಉನ್ನತೀಕರಣದ ಕಡೆ ಕೇಂದ್ರೀಕೃತವಾಗಿದೆ.

ಮೈಕಲ್ ಡಿ. ಸೋಜಾ ಸಮುದಾಯ ಯೋಜನೆಯ ಸಲಹೆಗಾರ ಶ್ರೀ ಓಸ್ವಾಲ್ಡ್ ರೊಡ್ರಿಗಸ್ ಅವರು ಸಭೆಗೆ ಸ್ವಾಗತ ಕೋರಿದರು ಮತ್ತು ನಡೆಯುತ್ತಿರುವ ಕಾರ್ಯಕ್ರಮಗಳ ಬಗ್ಗೆ ಸಂಕ್ಷಿಪ್ತ ಅವಲೋಕನ ನೀಡಿದರು.

ಪ್ರೊ. ಸಿ.ಎ. ಲಾಯ್ನಲ್ ಅರಾನ್ಹಾ ತಿಳಿವಳಿಕೆ ಒಡಂಬಡಿಕೆಯ ಸಂದರ್ಭ ಮತ್ತು ಮಹತ್ವವನ್ನು ವಿವರಿಸಿದರು, ಬಿಷಪ್ ಪೀಟರ್ ಪಾವ್ಲ್ ಸಲ್ದಾನ್ಹ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.

ಗುಲ್ಬರ್ಗಾ ಧರ್ಮಕ್ಷೇತ್ರದ ವಿಕಾರ್ ಜನರಲ್ ಅತೀ ವಂದನೀಯ ಮೊ| ಸಂತೋಷ್ ಬಾಪು ಅವರು ತಮ್ಮ ಧರ್ಮಕ್ಷೇತ್ರದ ಪರವಾಗಿ ಕೃತಜ್ಞತೆ ವ್ಯಕ್ತಪಡಿಸಿದರು ಮತ್ತು ಬಿಷಪ್ ಡುಮಿಂಗ್ ಡಾಯಸ್ ಅವರು ಕಾರವಾರ ಧರ್ಮಕ್ಷೇತ್ರದ ಪರವಾಗಿ ಧನ್ಯವಾದಗಳನ್ನು ತಿಳಿಸಿದರು.

ಶ್ರೀ ಮೈಕಲ್ ಡಿ’ ಸೋಜಾ ಮತ್ತು ಅವರ ಪತ್ನಿ ಶ್ರೀಮತಿ ಫ್ಲೇವಿಯಾ ಡಿ’ ಸೋಜಾ ಇವರನ್ನು ಕಾರವಾರ ಮತ್ತು ಗುಲ್ಬರ್ಗಾ ಧರ್ಮಕ್ಷೇತ್ರಗಳ ವತಿಯಿಂದ ಶಾಲು ಮತ್ತು ಪುಷ್ಪಗುಚ್ಛಗಳೊಂದಿಗೆ ಸನ್ಮಾನಿಸಲಾಯಿತು.

ಪ್ರಮುಖ ಅತಿಥಿಗಳಲ್ಲಿ ಕರ್ನಾಟಕ ಜೆಸ್ಯೂಟ್‌ಗಳ ಪ್ರಾಂತೀಯ ಮುಖ್ಯಸ್ಥರಾದ ವಂ. ಡಯೋನಿಯಸ್ ವಾಸ್ ಎಸ್.ಜೆ.; ಸಂತ ಜೋಸೆಫ್ ಸೆಮಿನರಿಯ ರೆಕ್ಟರ್ ವಂ. ಡಾ. ರಾಜೇಶ್ ರೊಸಾರಿಯೋ; ಮತ್ತು ಅಪೋಸ್ತಲಿಕ್ ಕಾರ್ಮೆಲೈಟ್‌ಗ ಪ್ರಾಂತೀಯ ಮುಖ್ಯಸ್ಥೆ ವಂ. ಭ. ನವೀನ್ ಎ.ಸಿ. ಮತ್ತು ಕಾರವಾರ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಮೊ| ವಂ| ರಿಚರ್ಡ್ ರೊಡ್ರಿಗಸ್ ಉಪಸ್ಥಿತರಿದ್ದರು.

ಬಿಷಪ್ ಪೀಟರ್ ಪಾವ್ಲ್ ಸಲ್ದಾನ್ಹ ಅವರು ಸಭೆಯನ್ನು ಪ್ರಾರ್ಥನೆಯಲ್ಲಿ ಮುನ್ನಡೆಸಿ, ಮೈಕಲ್ ಡಿ’ಸೋಜಾ 2030 ದೃಷ್ಟಿ (MDV2030) ಉಪಕ್ರಮದ ಮೇಲೆ ದೈವಿಕ ಆಶೀರ್ವಾದವನ್ನು ಬೇಡಿಕೊಂಡರು.

Related Posts

Leave a Reply

Your email address will not be published.