ಕಡಬ: ಶೌರ್ಯ ವಿಪತ್ತು ನಿರ್ವಹಣಾ ಘಟಕದ ವಾರ್ಷಿಕೋತ್ಸವ – ಬ್ಯಾಗ್ ವಿತರಣಾ ಕಾರ್ಯಕ್ರಮ


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಡಬ ತಾಲೂಕು (ರಿ), ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಕಡಬ ಘಟಕದ ಸಹಯೋಗದಲ್ಲಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ವಾರ್ಷಿಕೋತ್ಸವ ಹಾಗೂ ಬ್ಯಾಗ್ ವಿತರಣಾ ಕಾರ್ಯಕ್ರಮ ಕಡಬದ ಅಮೃತ ಸರೋವರದ ದಡದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಡಬ ವಲಯದ ಅಧ್ಯಕ್ಷರಾದ ಕರುಣಾಕರ ಗೋಗಟೆ ಅವರು ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಡಬ ತಾಲ್ಲೂಕು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಕ್ಯಾಪ್ಟನ್ ಶ್ರೀಯುತ ಭವನಿ ಶಂಕರ್ ವಹಿಸಿದ್ದರು.
ಕಡಬ ತಾಲೂಕಿನ ಆರು ಶೌರ್ಯ ವಿಪತ್ತು ನಿರ್ವಹಣಾ ಘಟಕಗಳ ಸದಸ್ಯರಿಗೆ ಬ್ಯಾಗ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಬಾಬು ನಾಯ್ಕ್ ಅವರು, ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಕಲ್ಪನೆಯಂತೆ ಸಮಾಜಮುಖಿ ಉದ್ದೇಶದಿಂದ ಆರಂಭವಾದ ಶೌರ್ಯ ವಿಪತ್ತು ನಿರ್ವಹಣಾ ಘಟಕವು, ಸ್ಥಳೀಯ ಮಟ್ಟದಲ್ಲಿ ಸರ್ಕಾರದ ವ್ಯವಸ್ಥೆಯೊಂದಿಗೆ ಸಮನ್ವಯ ಸಾಧಿಸಿ ವಿಪತ್ತು ಸಂದರ್ಭದಲ್ಲಿ ಸೇವೆ ಸಲ್ಲಿಸುವ ವಿನೂತನ ಕಾರ್ಯಕ್ರಮವಾಗಿದೆ. ಘಟಕದ ಸದಸ್ಯರು ಸೇವಾಮನೋಭಾವದಿಂದ ಹಲವಾರು ಸಾಮಾಜಿಕ ಹಾಗೂ ವಿಪತ್ತು ಸೇವೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ ಎಂದು ಪ್ರಶಂಸಿಸಿದರು.
ಉಪ ಅರಣ್ಯಾಧಿಕಾರಿ ಶ್ರೀಯುತ ಚಿದಾನಂದ ಅವರು ಮಾತನಾಡಿ, ಶೌರ್ಯ ವಿಪತ್ತು ನಿರ್ವಹಣಾ ತಂಡದ ಕಾರ್ಯವನ್ನು ಶ್ಲಾಘಿಸಿ, ತಮ್ಮ ಇಲಾಖೆಯಿಂದ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ನೆಲ್ಯಾಡಿ ವಲಯದ ಉಪ ಅರಣ್ಯಾಧಿಕಾರಿ ಶ್ರೀಯುತ ಸುಬ್ರಹ್ಮಣ್ಯ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾ ಸದಸ್ಯ ಶಿವಪ್ರಸಾದ್ ಮೈಲೇರಿ, ಕುಟ್ರುಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಮನ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆನಂದ್ ಗೌಡ ಎ., ಕಡಬ ವಲಯ ಒಕ್ಕೂಟ ಅಧ್ಯಕ್ಷ ರಮೇಶ್ ರೈ ಅರ್ಪಜೆ ಅವರು ಸಾಂದರ್ಭಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಕಡಬ ಒಕ್ಕೂಟದ ಅಧ್ಯಕ್ಷೆ ನಳಿನಿ ರೈ, ಗ್ರಾಮ ಪಂಚಾಯತ್ ಸದಸ್ಯರಾದ ಲಕ್ಷ್ಮೀಶ ಬಂಗೇರ, ಮೋಹನ್ ಕೆರೆಕ್ಕೋಡಿ, ಕಡಬ ವಲಯ ಭಜನಾ ಪರಿಷತ್ ಅಧ್ಯಕ್ಷ ರಮೇಶ್ ಅಡಿಲು, ಜನಜಾಗೃತಿ ವೇದಿಕೆ ಸದಸ್ಯರು, ಒಕ್ಕೂಟದ ಅಧ್ಯಕ್ಷರು, ಸಂಘದ ಸದಸ್ಯರು, ಜ್ಞಾನವಿಕಾಸ ಸಮನ್ವಯಾಧಿಕಾರಿ, ಕಡಬ ತಾಲೂಕಿನ ಶೌರ್ಯ ವಿಪತ್ತು ನಿರ್ವಹಣಾ ಘಟಕಗಳ ಸದಸ್ಯರು, ಸೇವಾಪ್ರತಿನಿಧಿಗಳು ಹಾಗೂ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಾಸ್ತಾವಿಕ ಮಾತುಗಳೊಂದಿಗೆ ಕಡಬ ತಾಲ್ಲೂಕು ಯೋಜನಾಧಿಕಾರಿ ಶ್ರೀಯುತ ಪ್ರಕಾಶ್ ಕುಮಾರ್ ಅವರು ಸ್ವಾಗತಿಸಿದರು. ವಲಯ ಮೇಲ್ವಿಚಾರಕ ವಿಜೇಶ್ ಜೈನ್ ವಂದಿಸಿದರು. ಮೇಲ್ವಿಚಾರಕ ರವಿಪ್ರಸಾದ್ ಕಾರ್ಯಕ್ರಮವನ್ನು ನಿರೂಪಿಸಿದರು. ಸೇವಾಪ್ರತಿನಿಧಿ ನಳಿನಿ ಕಾರ್ಯಕ್ರಮವನ್ನು ನಿರ್ವಹಿಸಿದರು.

Related Posts

Leave a Reply

Your email address will not be published.