ಓಮನ್ನಲ್ಲಿ ಬಹು ವಾಹನ ಅಪಘಾತ: ಉಡುಪಿ ಮೂಲದ ಯುವಕ ಸೇರಿ ಮೂವರು ಮೃತ
ಉಡುಪಿ : ಓಮನ್ನ ಉತ್ತರ ಅಲ್ ಬಟಿನಾ ಗವರ್ನರೇಟ್ನ ಲಿವಾ ವಿಲಾಯತ್ನಲ್ಲಿ ಭಾನುವಾರ ಮುಂಜಾನೆ ನಡೆದ ಬಹು ವಾಹನ ಅಪಘಾತದಲ್ಲಿ ಉಡುಪಿಯ ಕಾಪು ಸಮೀಪದ ಉಚ್ಚಿಲ ಕಲತೂರು ನಿವಾಸಿ ಚೇತನ್ (26) ಸೇರಿದಂತೆ ಮೂವರು ಮೃತಪಟ್ಟಿದ್ದು, ಇನ್ನೂ ಮೂವರು ಗಾಯಗೊಂಡಿದ್ದಾರೆ.
ನಾಗರಿಕ ರಕ್ಷಣಾ ಮತ್ತು ಆಂಬ್ಯುಲೆನ್ಸ್ ಪ್ರಾಧಿಕಾರದ ಮಾಹಿತಿಯಂತೆ, ಮೂರು ವಾಹನಗಳ ನಡುವೆ ನಡೆದ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ತುರ್ತು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದ ಬಳಿಕ ಅವಶೇಷಗಳಲ್ಲಿ ಸಿಲುಕಿದ್ದವರಿಗೆ ರಕ್ಷಣಾ ಸಿಬ್ಬಂದಿ ಸಹಾಯ ಮಾಡಿದ್ದು, ವೈದ್ಯಕೀಯ ತಂಡಗಳು ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿದ ನಂತರ ಗಾಯಾಳುಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.















