ಮೀಟರ್ ರೀಡರ್ ಮೇಲೆ ನಾಯಿ ದಾಳಿ, ಕಿತ್ತು ಬಂದ ಕೈಯ ಮಾಂಸ
ಬಂಟ್ವಾಳ: ಕರ್ತವ್ಯದ ವೇಳೆ ಮೆಸ್ಕಾಂನ ಮೀಟರ್ ರೀಡರ್ ಒಬ್ಬರಿಗೆ ಸಾಕು ನಾಯಿಯೊಂದು ಕಚ್ಚಿ ಗಂಭೀರ ಗಾಯಗೊಳಿಸಿದ ಘಟನೆ ರಾಯಿ ಗ್ರಾಮದ ಕೈತ್ರೋಡಿ ಕ್ವಾಟ್ರಸ್‌ನಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ. ಇರಾ ಗ್ರಾಮದ ನಿವಾಸಿಯಾಗಿರುವ ಸಂಪತ್ ಆರ್. ಶೆಟ್ಟಿ ನಾಯಿ ಕಡಿತಕ್ಕೊಳಗಾಗಿದ್ದು ಕೈಗೆ ಗಂಭೀರ ಗಾಯಗೊಂಡ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸಂಪತ್ ಅವರು ಕೈತ್ರೋಡಿ ಕ್ವಾಟ್ರಸ್ ಬಳಿ ಮೀಟರ್ ರೀಡಿಂಗ್ ಮುಗಿಸಿ ಮುಖ್ಯ ರಸ್ತೆಯಲ್ಲಿ ಬರುತ್ತಿದ್ದ ವೇಳೆ ಮನೆಯೊಂದರ ಸಾಕು ನಾಯಿ ಏಕಾಏಕಿ ಓಡಿ ಬಂದು ಇವರ ಕೈಗೆ ಕಚ್ಚಿ ಗಾಯಗೊಳಿಸಿದೆ. ನಾಯಿ ದಾಳಿಗೆ ಒಳಗಾದ ಸಂಪತ್ ಅವರ ಕೈಯ ಮಾಂಸವೇ ಕಿತ್ತು ಬಂದಿದೆ. ತಕ್ಷಣ ಸ್ಥಳೀಯರು ರಾಯಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ತಕ್ಷಣ ಶಸ್ತ್ರಚಿಕಿತ್ಸೆಯ ಅಗತ್ಯತೆ ಇರುವುದರಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಿ ಮಂಗಳವಾರ ಶಸ್ತ್ರಚಿಕಿತ್ಸೆ ಮಾಡಲಾಗಿದೆ.
ಮೀಟರ್ ರೀಡರ್‌ಗಳಿಗೆ ಭದ್ರತೆಯಿಲ್ಲ:
ವಿದ್ಯುತ್ ಬಿಲ್ ನೀಡಲು ಮನೆ ಮನೆಗಳಿಗೆ ಹೋಗುವ ಮೆಸ್ಕಾಂನ ಮೀಟರ್ ರೀಡರ್‌ಗಳು ಇಂತಹ ಸಮಸ್ಯೆಗಳನ್ನು ಹಲವು ಸಮಯದಿಂದ ಎದುರಿಸಿಕೊಂಡು ಬರುತ್ತಿದ್ದಾರೆ. ಇವರ ಜೀವಕ್ಕೆ ಭದ್ರತೆಯನ್ನು ಮೆಸ್ಕಾಂ ಹಾಗೂ ಗುತ್ತಿಗೆ ಸಂಸ್ಥೆಗಳು ನೀಡುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ನಾಯಿ ಕಡಿತಕ್ಕೊಳಗಾಗಿರುವ ಸಂಪತ್ ಶೆಟ್ಟಿ ಮೀಟರ್ ರೀಡರ್‌ಗಳ ಮೇಲ್ವಿಚಾರಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ರಾಯಿ ಭಾಗದಲ್ಲಿ ಪೂರ್ಣಕಾಲಿಕ ಮೀಟರ್ ರೀಡರ್ ಇಲ್ಲದೆ ಇದ್ದುದರಿಂದ ಕಳೆದ ಹಲವು ಸಮಯಗಳಿಂದ ಸಂಪತ್ ಅವರೇ ಮೀಟರ್ ರೀಡಿಂಗ್‌ನ ಕಾರ್ಯ ಮಾಡುತ್ತಿದ್ದಾರೆ. ಈ ಘಟನೆಯ ಬಳಿಕ ಸಂಪತ್ ಆಸ್ಪತ್ರೆಗೆ ದಾಖಲಾಗಿದ್ದು ಶಸ್ತ್ರಚಿಕಿತ್ಸೆ ಸಹಿತ ಆಸ್ಪತ್ರೆಗೆ ಸಾಕಷ್ಟು ಖರ್ಚಾಗಿದ್ದು ಗುತ್ತಿಗೆ ಸಂಸ್ಥೆಯಾಗಲಿ, ಮೆಸ್ಕಾಂ ಆಗಲಿ ಅವರಿಗೆ ನೈತಿಕ ಹಾಗೂ ಆರ್ಥಿಕ ಬೆಂಬಲ ನೀಡದೆ ಇರುವುದರಿಂದ ಆಸ್ಪತ್ರೆಯ ಬಿಲನ್ನು ಸ್ವತಃ ಅವರೇ ಭರಿಸುತ್ತಿದ್ದಾರೆ. ನಾಯಿ ಕಡಿತದಂತಹ ಪ್ರಕರಣಗಳು ಪದೇ ಪದೇ ನಡೆಯುತ್ತಿದ್ದರೂ ಮೆಸ್ಕಾಂ ಮೀಟರ್ ರೀಡರ್‌ಗಳಿಗೆ ಭದ್ರತೆ ಒದಗಿಸುವ ಅಥವಾ ಅಂತಹ ದುರ್ಘಟನೆಗಳಾದ ವೈದ್ಯಕೀಯ ನೆರವು ನೀಡವ ಬಗ್ಗೆ ಕಾಳಜಿ ವಹಿಸ ಬೇಕೆಂದು ಮೀಟರ್ ರೀಡರ್‌ಗಳು ಆಗ್ರಹಿಸಿದ್ದಾರೆ.


















