ಬಹ್ರೇನ್ ನ ಜಲಶುದ್ಧೀಕರಣ ಘಟಕದ ಮೇಲೆ ಇರಾನ್ ಡ್ರೋನ್ ದಾಳಿ
ದುಬೈ: ಮಧ್ಯಪ್ರಾಚ್ಯದಲ್ಲಿ ಯುದ್ಧ ಆರಂಭವಾಗಿ ಒಂಬತ್ತು ದಿನಗಳು ಕಳೆದಿದ್ದು, ಪರಿಸ್ಥಿತಿ ಕ್ಷಣಕ್ಷಣಕ್ಕೂ ಭೀಕರ ಸ್ವರೂಪ ಪಡೆಯುತ್ತಿದೆ.
ಭಾನುವಾರ ಬೆಳ್ಳಂಬೆಳಗ್ಗೆ ಇರಾನ್ ಮತ್ತು ಇಸ್ರೇಲ್ ನಡುವೆ ನಡೆದ ಪರಸ್ಪರ ವಾಯುದಾಳಿಗಳಿಂದ ಗಲ್ಫ್ ರಾಷ್ಟ್ರಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಅರಬ್ ರಾಷ್ಟ್ರವೊಂದರ ಕುಡಿಯುವ ನೀರಿನ ಮೂಲದ ಮೇಲೆ ಇರಾನ್ ದಾಳಿ ನಡೆಸಿದೆ. ಬಹ್ರೇನ್‌ನ ಪ್ರಮುಖ ಜಲಶುದ್ಧೀಕರಣ (Desalination) ಘಟಕವೊಂದರ ಮೇಲೆ ಇರಾನ್ ಡ್ರೋನ್ ದಾಳಿ ಮಾಡಿದ್ದು, ಘಟಕಕ್ಕೆ ಭಾರಿ ಹಾನಿಯಾಗಿದೆ ಎಂದು ಬಹ್ರೇನ್ ಸರ್ಕಾರ ಖಚಿತಪಡಿಸಿದೆ. ಪರ್ಷಿಯನ್ ಗಲ್ಫ್ ಕರಾವಳಿಯಾದ್ಯಂತ ಇರುವ ನೂರಾರು ಘಟಕಗಳೇ ಅರಬ್ ರಾಷ್ಟ್ರಗಳಿಗೆ ಕುಡಿಯುವ ನೀರಿನ ಮುಖ್ಯ ಆಧಾರವಾಗಿದ್ದು, ಈ ದಾಳಿಯು ಇಡೀ ಪ್ರದೇಶದ ಇಂಧನ ಮತ್ತು ನೀರಿನ ಭದ್ರತೆಗೆ ಸವಾಲೊಡ್ಡಿದೆ. ಇನ್ನು ಮುಹರ್ರಕ್ ನಗರದಲ್ಲಿ ಕ್ಷಿಪಣಿ ಅವಶೇಷಗಳು ಬಿದ್ದು ಮೂವರು ಗಾಯಗೊಂಡಿದ್ದಾರೆ.
ಇತ್ತ ಇಸ್ರೇಲ್ ಸೇನೆಯು ದಕ್ಷಿಣ ಲೆಬನಾನ್ ಮತ್ತು ಬೈರುತ್ ಮೇಲೆ ಸರಣಿ ವಾಯುದಾಳಿಗಳನ್ನು ನಡೆಸಿದೆ. ಈ ದಾಳಿಯಲ್ಲಿ ಇರಾನ್‌ನ ಕ್ರಾಂತಿಕಾರಿ ಹಸಿರು ಪಡೆಯ (Quds Force) ಕಮಾಂಡರ್‌ಗಳನ್ನು ಗುರಿಯಾಗಿಸಲಾಗಿದ್ದು, ಒಟ್ಟು 12 ಜನರು ಸಾವನ್ನಪ್ಪಿದ್ದಾರೆ ಎಂದು ಲೆಬನಾನ್ ಆರೋಗ್ಯ ಸಚಿವಾಲಯ ತಿಳಿಸಿದೆ. “ಮುಂದಿನ ಹಂತದಲ್ಲಿ ನಾವು ಇನ್ನೂ ಅನೇಕ ಅಚ್ಚರಿಗಳನ್ನು ನೀಡಲಿದ್ದೇವೆ” ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಎಚ್ಚರಿಸಿದ್ದಾರೆ.


















