ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದಲ್ಲಿ ಪರಿಸರ ಜಾಗೃತಿ ಯಾನ

ಅವೈಜ್ಞಾನಿಕ ಕಾಮಗಾರಿಗಳು ಪಶ್ಚಿಮ ಘಟ್ಟಗಳಿಗೆ ಇಂದು ಅಪಾರ ಹಾನಿ ತಂದಿದೆ. ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಕಾಡಿನ ನಾಶ ಮುಂದಿನ ದಿನಗಳ ಭೀಕರತೆಯನ್ನು ಈಗಲೇ ಸಾರುತ್ತಿದೆ. ಉಳಿದಿರುವ ಕಾಡುಗಳನ್ನಾದರೂ ಉಳಿಸುವ ನಿರ್ಧಾರ ನಾವು ಮಾಡದಿದ್ದರೆ ಪ್ರಪಂಚ ನಾಶವಾಗುವ ದಿನ ದೂರವಿಲ್ಲ. ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಅಗತ್ಯದ ಬಗ್ಗೆ ಚಿಂತಿಸಬೇಕು ಎಂದು ಖ್ಯಾತ ಪರಿಸರವಾದಿ ದಿನೇಶ್ ಹೊಳ್ಳ ಹೇಳಿದರು.
ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಬಾಬಾ ಇಕೋ ಕ್ಲಬ್ ಚೊಕ್ಕಾಡಿ ಪ್ರೌಢಶಾಲೆಯ ಸಹಯೋಗದಲ್ಲಿ ನಡೆದ ಪರಿಸರ ಜಾಗೃತಿ ಯಾನದ ಸಮಾರೋಪ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪರಿಸರ ನಾಶದ ಅನಾಹುತ ಹಾಗೂ ಪರಿಸರ ಜಾಗೃತಿಯ ಬಗ್ಗೆ ಅವರು ಮಾತುಗಳನ್ನಾಡಿದರು.
ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚಂದ್ರಶೇಖರ ಪೇರಾಲು ಸಭಾಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಚೊಕ್ಕಾಡಿ ವಿದ್ಯಾಸಂಸ್ಥೆಗಳ ಸಂಚಾಲಕರಾದ ರಾಧಾಕೃಷ್ಣ ಬೊಳ್ಳೂರು ಉಪಸ್ಥಿತರಿದ್ದರು.
ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿನಿಧಿ ರಾಮಚಂದ್ರ ಪಲ್ಲತಡ್ಕ, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ತೇಜಸ್ವಿ ಕಡಪಳ ಹಾಗೂ ಚಂದ್ರಮತಿ, ಚೊಕ್ಕಾಡಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸಂಕೀರ್ಣ ಚೊಕ್ಕಾಡಿ, ಚೊಕ್ಕಾಡಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಭವ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
4 ಶಿಕ್ಷಣ ಸಂಸ್ಥೆಗಳಲ್ಲಿ ನಡೆದ ಪರಿಸರ ಜಾಗೃತಿ ಯಾನ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಪರಿಸರವಾದಿ ದಿನೇಶ್ ಹೊಳ್ಳರನ್ನು ಹಾಗೂ ಪರಿಸರ ಜಾಗೃತಿ ಯಾನ ಸರಣಿ ಕಾರ್ಯಕ್ರಮಗಳಲ್ಲಿ ಪರಿಸರ ಗೀತೆ ಕಾರ್ಯಕ್ರಮವನ್ನು ನಡೆಸಿ ಕೊಟ್ಟ ಸಂಧ್ಯಾ ಮಂಡೆಕೋಲು, ರಮೇಶ್ ಮೆಟ್ಟಿನಡ್ಕ, ಶುಭಧಾ ಆರ್.ಪ್ರಕಾಶ್ ಹಾಗೂ ಲಿಪಿಶ್ರೀ ಯವರನ್ನು ಸಾಹಿತ್ಯ ಪರಿಷತ್ತಿನ ವತಿಯಿಂದ ಗೌರವಿಸಲಾಯಿತು.
ಔಷಧೀಯ ಸಸ್ಯಗಳ ಬಗ್ಗೆ ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ತೇಜಸ್ವಿ ಕಡಪಳ ಪ್ರಾಸ್ತಾವಿಕ ಮಾತುಗಳೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು. ಸಂಕೀರ್ಣ ಚೊಕ್ಕಾಡಿ ಧನ್ಯವಾದ ಸಮರ್ಪಣೆಗೈದರು. ಬಾಬಾ ಇಕೋ ಕ್ಲಬ್ ನ ಸಂಚಾಲಕಿ ಶ್ರೀಮತಿ ಸಂಧ್ಯಾಕುಮಾರಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕ – ಸಿಬ್ಬಂದಿ ವರ್ಗ ಕಾರ್ಯಕ್ರಮದಲ್ಲಿ ಸಹಕರಿಸಿದರು.