Mangaluru: ಮುಂದಿನ ಮಳೆಗಾಲದೊಳಗೆ ಸೀ ಆ್ಯಂಬುಲೆನ್ಸ್ ಕಾರ್ಯಾಚರಣೆ
ಮೀನುಗಾರರು ಮೀನುಗಾರಿಕೆಗೆ ಹೋದ ಸಂದರ್ಭ ಸಮುದ್ರದಲ್ಲಿ ಅವಘಡಗಳು ಉಂಟಾದಾಗ ಮೀನುಗಾರರ ಜೀವರಕ್ಷಣೆಗೆ ನೆರವಾಗುವ ನಿಟ್ಟಿನಲ್ಲಿ ಆರಂಭಿಸಲು ಉದ್ದೇಶಿಸಲಾಗಿರುವ “ಸೀ ಆ್ಯಂಬುಲೆನ್ಸ್’ ವ್ಯವಸ್ಥೆ ಮುಂದಿನ ಮಳೆಗಾಲದ ಒಳಗೆ ಕಾರ್ಯಾರಂಭ ಮಾಡಲಿದೆ ಎಂದು ರಾಜ್ಯ ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ ಸಚಿವ ಮಂಕಾಳ ಎಸ್. ವೈದ್ಯ ತಿಳಿಸಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮದವರ ಜತೆ ಅವರು ಮಾತನಾಡಿ, ಸೀ ಆ್ಯಂಬುಲೆನ್ಸ್ ವ್ಯವಸ್ಥೆ ಕಲ್ಪಿಸುವುದಾಗಿ ಈಗಾಗಲೇ ಮೀನುಗಾರರಿಗೆ ಭರವಸೆ ನೀಡಲಾಗಿತ್ತು. ಅದರಂತೆ ಬಜೆಟ್‌ನಲ್ಲಿ ಘೋಷಣೆಗೊಂಡು ಟೆಂಡರ್ ಪ್ರಕ್ರಿಯೆ ಅಂತಿಮಗೊಂಡು, ಪ್ರಸ್ತುತ ಚೆನ್ನೈನಲ್ಲಿ ನಿರ್ಮಾಣ ಕಾರ್ಯ ಆರಂಭವಾಗಿದೆ. ಮುಂದಿನ ಮಳೆಗಾಲದ ಒಳಗೆ ಕಾರ್ಯಾರಂಭ ಮಾಡಲಿದೆ ಎಂದರು.


















