ಕಾರ್ಮಿಕ ವಿಮಾ ಯೋಜನೆಯ ಸೌಲಭ್ಯಗಳು ಸಿಗದ ಬಗ್ಗೆ ಸದನದ ಗಮನಕ್ಕೆ ತಂದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ
ಕಾಪು: ರಾಜ್ಯದಲ್ಲಿ ಕಾರ್ಮಿಕರಿಗೆ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸಲು ಪ್ರತಿ ಜಿಲ್ಲೆಯಲ್ಲಿಯೂ ಕಾರ್ಮಿಕ ರಾಜ್ಯ ವಿಮಾ ಯೋಜನೆಯ ಆಸ್ಪತ್ರೆಗಳಿದ್ದು, ಮಾರಾಣಾಂತಿಕ ಖಾಯಿಲೆಗಳಿಗೆ ಬೇಕಾದ ಔಷಧೋಪಚಾರಗಳ ಕೊರತೆ ಇರುವುದು ಸರಕಾರದ ಗಮನಕ್ಕೆ ಬಂದಿದೆಯೇ..? ಬಂದಿದ್ದಲ್ಲಿ ಕೈಗೊಂಡ ಕ್ರಮವೇನು ಹಾಗೂ ಕಳೆದ 2 ವರ್ಷಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ನೊಂದಾಯಿತ ಕಟ್ಟಡ ಕಾರ್ಮಿಕರು ಸಹಜ ಹಾಗೂ ಕೆಲಸದ ಸ್ಥಳದಲ್ಲಿ ಮರಣ ಹೊಂದಿದ್ದಲ್ಲಿ ಅವಲಂಬಿತರಿಗೆ ಸರಕಾರ ನೀಡುಬಹುದಾದ ಪರಿಹಾರಗಳೆಷ್ಟು? ಎಂಬುದರ ಬಗ್ಗೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಅಧಿವೇಶನದಲ್ಲಿ ಕಾರ್ಮಿಕ ಸಚಿವರಲ್ಲಿ ಪ್ರಶ್ನೆ ಕೇಳಿದ್ದಾರೆ.
ಗುರ್ಮೆ ಸುರೇಶ್ ಶೆಟ್ಟಿ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಾರ್ಮಿಕ ಸಚಿವರಾದ ಮಾನ್ಯ ಸಂತೋಷ್ ಲಾಡ್ ಅವರು ಉತ್ತರಿಸುತ್ತಾ ಕಾರ್ಮಿಕ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆಗಳು ಇಲಾಖೆಯಲ್ಲಿ ದಿನಾಂಕ 19.06.2025 ರಂದು ನಡೆದ ಔಷಧ ಖರೀದಿ ಸಮಿತಿ ಸಭೆಯಲ್ಲಿ ಅನುಮೋದನೆಗೊಂಡು ಬೇಡಿಕೆಯ ಪಟ್ಟಿಯನ್ವಯ ಇ.ಎಸ್.ಐ.ಸಿ ದರ ಗುತ್ತಿಗೆಯಲ್ಲಿ ಅನುಮೋದನೆಗೊಂದ ಸಂಸ್ಥೆಗಳಿಗೆ ಸರಬರಾಜು ಆದೇಶವನ್ನು ನೀಡಲಾಗಿದ್ದು, ಸದ್ರಿ ಸಂಸ್ಥೆಗಳು ಈಗಾಗಲೇ ಎಲ್ಲಾ ಕಾ.ರಾ.ವಿ ಆಸ್ಪತ್ರೆ ಮತ್ತು ಚಿಕಿತ್ಸಾಲಯಗಳಿಗೆ ಅಗತ್ಯವಿರುವ ಔಷಧಿಗಳನ್ನು ಸರಬರಾಜು ಮಾಡಿದ್ದು, ವಿಮಾ ರೋಗಿಗಳಿಗೆ ಅವಶ್ಯಕತೆಗೆ ಅನುಗುಣವಾಗಿ ಔಷಧಿಗಳ ಕೊರತೆಯನ್ನು ನೀಗಿಸಲಾಗಿರುತ್ತದೆ. ಅಲ್ಲದೇ ಲಭ್ಯವಿಲ್ಲದೇ ಇರುವ ಔಷಧಿಗಳನ್ನು ವಿಮಾದಾರರಿಗೆ ಖರೀದಿಸಲು ಸೂಚಿಸಿದ್ದು, ಅದರ ವೆಚ್ಚವನ್ನು ಇಲಾಖೆ ವತಿಯಿಂದ ಮರುಪಾವತಿ ಮಾಡಲಾಗುತ್ತದೆ.
ಮಂಡಳಿಯ ನೊಂದಾಯಿತ ಕಾರ್ಮಿಕರು ಸಹಜ ಮರಣ ಹೊಂದಿದ್ದಲ್ಲಿ ಈ ಹಿಂದೆ ರೂ 75000 ಪರಿಹಾರ ನೀಡುತ್ತಿದ್ದು, ಪ್ರಸ್ತುತ 1.50 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಕೆಲಸದ ಸ್ಥಳದಲ್ಲಿ ಅಫಘಾತದಿಂದ ಮರಣ ಹೊಂದಿದ ಫಲಾನುಭವಿಗಳ ಅವಲಂಬಿತರಿಗೆ ಈ ಹಿಂದೆ 5 ಲಕ್ಷಗಳ ಪರಿಹಾರವನ್ನು ನೀಡುತ್ತಿದ್ದು, ಪ್ರಸ್ತುತ 8 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಕಳೆದ 2 ವರ್ಷಗಳಲ್ಲಿ ಅಪಘಾತದಿಂದ ಮರಣ ಹೊಂದಿದ 15 ಫಲಾನುಭವಿಗಳಿಗೆ ಒಟ್ಟು ರೂ 75 ಲಕ್ಷರೂ ಪರಿಹಾರ ಮೊತ್ತವನ್ನು ನೀಡಲಾಗಿರುತ್ತದೆ ಎಂದರು.


















