ಎಸ್ಜೆಇಸಿ ಬಿಇ ವಿದ್ಯಾರ್ಥಿನಿ ಎನ್ಸಿಸಿ ಪಿಒ ಕ್ಯಾಡೆಟ್ ಲಿಷಾ ಡಿ. ಸುವರ್ಣಗೆ ರಕ್ಷಣಾ ಸಚಿವರ ಪ್ರಶಂಸಾ ಪ್ರಶಸ್ತಿ
ಮಂಗಳೂರು ವಾಮಂಜೂರಿನ ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಎಂಜಿನಿಯರಿಂಗ್ ವಿಭಾಗದ ಬಿಇ ವಿದ್ಯಾರ್ಥಿನಿ ಹಾಗೂ ಎನ್ಸಿಸಿ ಪಿಒ ಕ್ಯಾಡೆಟ್ ಲಿಷಾ ಡಿ. ಸುವರ್ಣ ಅವರಿಗೆ ರಾಷ್ಟ್ರ ಮಟ್ಟದ ಅತ್ಯುನ್ನತ ಗೌರವವಾದ ರಕ್ಷಣಾ ಸಚಿವರ ಪ್ರಶಂಸಾ ಪ್ರಶಸ್ತಿ ಪ್ರದಾನವಾಗಿದೆ. ಎನ್ಸಿಸಿ ಸಂಘಟನೆಯಲ್ಲಿ ಅವರು ತೋರಿದ ಅಪೂರ್ವ ನಾಯಕತ್ವ, ಶಿಸ್ತು, ಸಮರ್ಪಣೆ ಮತ್ತು ಸೇವೆಯನ್ನು ಗುರುತಿಸಿ ಈ ಗೌರವ ನೀಡಲಾಗಿದೆ.

ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನವದೆಹಲಿಯ ರಿಪಬ್ಲಿಕ್ ಡೇ ಕ್ಯಾಂಪ್ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಗೌರವಾನ್ವಿತ ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಪ್ರದಾನಿಸಿದರು. ಈ ವರ್ಷ ದೇಶದಾದ್ಯಂತ ಕೇವಲ ಆರು ಎನ್ಸಿಸಿ ಕ್ಯಾಡೆಟ್ಗಳಿಗೆ ಮಾತ್ರ ಈ ಪ್ರಶಸ್ತಿ ದೊರೆತಿದ್ದು, ರಾಷ್ಟ್ರಮಟ್ಟದಲ್ಲಿ ಏಕೈಕ ನೌಕಾ ವಿಭಾಗದ ಕ್ಯಾಡೆಟ್ ಆಗಿ ಲಿಷಾ ಈ ಗೌರವಕ್ಕೆ ಪಾತ್ರರಾಗಿದ್ದಾರೆ.
ಲಿಷಾ ಎನ್ಸಿಸಿಯಲ್ಲಿ ಸಂಶೋಧನೆ ಆಧಾರಿತ ಯೋಜನೆಗಳು ಹಾಗೂ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಹಿಂದುಳಿದ ವಿದ್ಯಾರ್ಥಿಗಳಿಗೆ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ಉಚಿತ ತರಬೇತಿಯನ್ನು ನೀಡುತ್ತಿದ್ದಾರೆ. ಭರತನಾಟ್ಯ ಮತ್ತು ಕರ್ಣಾಟಕ ಸಂಗೀತದಲ್ಲಿಯೂ ತರಬೇತಿ ಪಡೆದಿದ್ದಾರೆ.

ಹಿಂದಿನ ವರ್ಷವೂ ರಿಪಬ್ಲಿಕ್ ಡೇ ಕ್ಯಾಂಪ್ನಲ್ಲಿ ಭಾಗವಹಿಸಿದ್ದ ಲಿಷಾ, “ಬೆಸ್ಟ್ ಕ್ಯಾಡೆಟ್ ನೇವಿ (ಸೀನಿಯರ್ ವಿಂಗ್)” ಪ್ರಶಸ್ತಿಯನ್ನು ಕರ್ನಾಟಕ?ಗೋವಾ ನಿರ್ದೇಶನಾಲಯದಿಂದ ಪಡೆದಿದ್ದಾರೆ. ಜೊತೆಗೆ ಸೇನಾ ಮುಖ್ಯಸ್ಥರಾದ ಜನರಲ್ ಉಪೇಂದ್ರ ದ್ವಿವೇದಿ ಅವರಿಂದ ಆಲ್ ಇಂಡಿಯಾ “ಬೆಸ್ಟ್ ಫ್ಲಾಗ್ ಏರಿಯಾ ಬ್ರೀಫರ್” ಪ್ರಶಸ್ತಿಯನ್ನೂ ಪಡೆದಿದ್ದಾರೆ.
ಲಿಷಾ ಅವರ ಈ ಅಪೂರ್ವ ಸಾಧನೆ ದಕ್ಷಿಣ ಭಾರತದ ಎನ್ಸಿಸಿ ಸಮುದಾಯಕ್ಕೆ ಹೆಮ್ಮೆಯನ್ನು ತಂದಿದೆ. ಎಸ್ಜೆಇಸಿ ಆಡಳಿತ ಮಂಡಳಿ, ಡೀನ್ಗಳು, ವಿಭಾಗಾಧ್ಯಕ್ಷರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಲಿಷಾ ಡಿ. ಸುವರ್ಣ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ.


















