ಪಡುಬಿದ್ರಿ ಅಡಿಗಳ್ ಸುಬ್ರಾಯ ಭಟ್ ಮೆಮೋರಿಯಲ್ ಟ್ರಸ್ಟ್ ನಿಂದ ಸಮವಸ್ತ್ರ ವಿತರಣೆ

ಬ್ರಹ್ಮವಿದ್ಯಾ ಪ್ರಕಾಶಿನಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪಡುಬಿದ್ರಿ ಗಣಪತಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಅಡಿಗಳ್ ಸುಬ್ರಾಯ ಭಟ್ ಮೆಮೋರಿಯಲ್ ಟ್ರಸ್ಟ್ ನ ವತಿಯಿಂದ ಸಮವಸ್ತ್ರವನ್ನು ವಿತರಣ ಕಾರ್ಯಕ್ರಮ ನಡೆಯಿತು.

“ಬಾಲ್ಯದಲ್ಲಿ ವಿದ್ಯಾಭ್ಯಾಸ ಮಾಡಿದ ಶಾಲೆಯ ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ನೀಡುವ ಯೋಗ ನಮಗೆ ದೊರಕಿದೆ. ಇದು ನಿಜಕ್ಕೂ ಸೌಭಾಗ್ಯ. ಶಾಲೆಯ ಋಣ ಬಹಳ ದೊಡ್ಡದು. ಈಗ ಈ ಮೂಲಕ ಋಣವನ್ನು ತೀರಿಸುವ ಅವಕಾಶ ದೊರೆತಿದೆ ” ಎಂದು ಶ್ರೀಮತಿ ಉಮಾ ಭಟ್
ಅವರು ಶ್ರೀ ಬ್ರಹ್ಮವಿದ್ಯಾ ಪ್ರಕಾಶಿನಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪಡುಬಿದ್ರಿ ಗಣಪತಿ ಪ್ರೌಢಶಾಲೆಯ ವಿದ್ಯಾರ್ಥಿಗಳೆಲ್ಲರಿಗೆ ಅಡಿಗಳ್ ಸುಬ್ರಾಯ ಭಟ್ ಮೆಮೋರಿಯಲ್ ಟ್ರಸ್ಟ್ ನ ವತಿಯಿಂದ ಸಮವಸ್ತ್ರವನ್ನು ವಿತರಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಡುಬಿದ್ರಿ ಗಣಪತಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಅನುರಾಧಾ ಪಿ.ಎಸ್. ಇವರು ಮಾತನಾಡಿ ” ವಿದ್ಯಾಸಂಸ್ಥೆಯ ಮೇಲಿನ ಅಭಿಮಾನದಿಂದ ಹಲವು ವರ್ಷಗಳಿಂದ ಅಡಿಗಳ್ ಸುಬ್ರಾಯ ಭಟ್ ಮೆಮೋರಿಯಲ್ ಟ್ರಸ್ಟ್ ನವರು ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ನೀಡುತ್ತಿದ್ದಾರೆ. ಟ್ರಸ್ಟ್ ನವರು ಈ ವರ್ಷವೂ ತಮ್ಮ ಸತ್ಸಂಪ್ರದಾಯವನ್ನು ಮುಂದುವರಿಸಿರುವುದು ನಿಜಕ್ಕೂ ಶ್ಲಾಘನೆಯ ವಿಷಯ. ಟ್ರಸ್ಟ್ ನ ಮುಖ್ಯಸ್ಥರೂ, ಹಿರಿಯರೂ ಆದ ಶ್ರೀ ಅಡಿಗಳ್ ವಾಸುದೇವ ಭಟ್ಟರು ತಮ್ಮ ತೊಂಬತ್ತನೇ ಜನ್ಮದಿನವನ್ನು ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ನೀಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿಕೊಂಡಿರುವುದು ನಮಗೆಲ್ಲರಿಗೂ ಸಂತೋಷವನ್ನು ನೀಡಿದೆ ” ಎಂದು ಹೇಳಿದರು.
ಈ ಸಮಾರಂಭದಲ್ಲಿ ಅದಮಾರು ಮಠದ ಶಿಕ್ಷಣ ಮಂಡಳಿಯ ಪ್ರತಿನಿಧಿ ಪ್ರೊ. ನಿತ್ಯಾನಂದ ಇವರು , ಹಳೆ ವಿದ್ಯಾರ್ಥಿ ಸಂಘದ ನಿರ್ದೇಶಕರಾದ ಶ್ರೀ ಅನಂತಪಟ್ಟಾಭಿ ರಾವ್ ಇವರು ಮುಖ್ಯ ಅಭ್ಯಾಗತರಾಗಿ ಆಗಮಿಸಿ , ವಿದ್ಯಾರ್ಥಿಗಳಿಗೆ ಹಿತವಚನವನ್ನು ನೀಡಿದರು.
ಈ ಸಂದರ್ಭದಲ್ಲಿ ಶ್ರೀ ವಾಸುದೇವ ಭಟ್ ಮತ್ತು ಶ್ರೀಮತಿ ರುಕ್ಮಿಣಿ ಭಟ್ ದಂಪತಿಗಳನ್ನು ಗೌರವಿಸಿ ಸಮ್ಮಾನಿಸಲಾಯಿತು.
ಪಡುಬಿದ್ರಿ ಗಣಪತಿ ಪ್ರೌಢಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಗಣೇಶ ಕೋಟ್ಯಾನ್ ಮತ್ತು ಸದಸ್ಯರು , ನವಶಕ್ತಿ ಮಹಿಳಾ ಮಂಡಲದ ಅಧ್ಯಕ್ಷರಾದ ಶ್ರೀಮತಿ ಸುಧಾ.ಆರ್. ನಾವಡ ಮತ್ತು ಸದಸ್ಯರು , ಉಭಯ ವಿದ್ಯಾಸಂಸ್ಥೆಗಳ ಅಧ್ಯಾಪಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಶಿಕ್ಷಕಿ ಶ್ರೀಮತಿ ಸ್ವಾತಿ ಅವರು ಪ್ರಾರ್ಥನೆ ಗೈದರು ಕಾರ್ಯಕ್ರಮದಲ್ಲಿ ಅಧ್ಯಾಪಕರಾದ ಶ್ರೀ ಶ್ರೀಶ ಇವರು ಸ್ವಾಗತಿಸಿ , ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಅಶೋಕ ಕೆ. ಇವರು ವಂದಿಸಿದರು. ಸಂಸ್ಕೃತ ಪ್ರಾಧ್ಯಾಪಕರಾದ ಡಾ. ರಾಘವೇಂದ್ರ ರಾವ್ ಕಾರ್ಯಕ್ರಮವನ್ನು ನಿರೂಪಿಸಿದರು.
