ಉತ್ತರಕಾಶಿ ಮೇಘಸ್ಫೋಟ: ಐವರು ಸಾವು, ಕೊಚ್ಚಿಹೋದ ಮನೆಗಳು

ಉತ್ತರಕಾಶಿ ಜಿಲ್ಲೆಯ ಧರಾಲಿ ಪ್ರದೇಶದಲ್ಲಿ ಮಂಗಳವಾರ ಮಧ್ಯಾಹ್ನ ಮೂರು ಗಂಟೆಗಳ ಅವಧಿಯಲ್ಲಿ ಮೂರು ಬಾರಿ ಮೇಘಸ್ಪೋಟವಾಗಿದ್ದು, ಭಾರಿ ಪ್ರವಾಹದಿಂದಾಗಿ ನಾಲ್ವರು ಸಾವನ್ನಪ್ಪಿದ್ದಾರೆ. ಒಂಬತ್ತು ಸೇನಾ ಸಿಬ್ಬಂದಿ ಸೇರಿದಂತೆ 59 ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದಾರೆ. ಭಾರತೀಯ ಸೇನೆ ಮತ್ತು ಪರಿಹಾರ ತಂಡಗಳಿಂದ ಬೃಹತ್ ಜಂಟಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ.

ಮೊದಲ ಮೇಘಸ್ಫೋಟದಿಂದ ಧಾರಾಲಿ ಗ್ರಾಮದ ಕಡೆಗೆ ಮಣ್ಣು, ಗುಡ್ಡ ಕುಸಿತ, ಕೆಸರು ನೀರು ಹರಿಯುವುದರೊಂದಿಗೆ ಭಾರಿ ಆತಂಕ ಸೃಷ್ಟಿಯಾಯಿತು. ಜನರು ಭಯದಿಂದ ಕಿರುಚಾಡಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು. ಹರ್ಸಿಲ್ ಸೇನಾ ಶಿಬಿರದ ಮುಂಭಾಗದಲ್ಲಿರುವ ಹರ್ಸಿಲ್‌ನಲ್ಲಿರುವ ಸೇನಾ ಘಟಕದ ಬಳಿ ಮಂಗಳವಾರ ಸಂಜೆ ಎರಡನೇ ಮೇಘಸ್ಫೋಟ ಸಂಭವಿಸಿದೆ.

ಸುಖಿ ಟಾಪ್‌ನಲ್ಲಿ ಮೂರನೇ ಮೇಘಸ್ಫೋಟ ಸಂಭವಿಸಿದೆ. ಇದರಿಂದಾಗಿ ಸೇನಾ ಶಿಬಿರದ ಬಳಿ ತಾತ್ಕಾಲಿಕ ಸರೋವರವನ್ನೆ ಸೃಷ್ಟಿಸಿತು. ಈ ಹೊಸ ಜಲಮೂಲವು ಭಾಗೀರಥಿ ನದಿಯ ಉದ್ದಕ್ಕೂ ಇರುವ ಪಟ್ಟಣಗಳಿಗೆ ಗಮನಾರ್ಹ ಅಪಾಯವನ್ನುಂಟುಮಾಡಿದೆ. ಸುಖಿ ಟಾಪ್ ಘಟನೆಯು ಹರ್ಸಿಲ್‌ಗೆ ಹೋಗುವ ರಸ್ತೆಯನ್ನು ಬಂದ್ ಮಾಡಿದೆ.

‘ಪ್ರಾಥಮಿಕ ವರದಿಗಳ ಪ್ರಕಾರ, ಕನಿಷ್ಠ ಐವರು ಮೃತಪಟ್ಟಿದ್ದಾರೆ. ಹರ್ಸಿಲ್‌ನಿಂದ ಸೇನೆಯ ತುಕಡಿಯೊಂದು ಘಟನಾ ಸ್ಥಳಕ್ಕೆ ತೆರಳಿ, ಪರಿಹಾರ ಕಾರ್ಯ ಕೈಗೊಂಡಿದೆ’ ಎಂದು ಉತ್ತರಕಾಶಿ ಜಿಲ್ಲಾಧಿಕಾರಿ ಪ್ರಶಾಂತ ಆರ್ಯ ತಿಳಿಸಿದ್ದಾರೆ.

Related Posts

Leave a Reply

Your email address will not be published.