ಮಂಜೇಶ್ವರ: ಕೊಲೆ ಪ್ರಕರಣ ಭೇದಿಸಿದ ಪೊಲೀಸರು: ಆರೋಪಿ ಬಂಧನ
ಮಂಜೇಶ್ವರ: ಬದಿಯಡ್ಕ ಸಮೀಪದ ಕುಂದ್ಲಾಜೆ ಪಂಚಾಯತಿನ ಮವ್ವಾರು ಆಜಿಲ ಎಂಬಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ವೃದ್ಧ ಮಹಿಳೆಯ ಸಾವು ಕೊಲೆಯಾಗಿದೆಂಬ ಮರಣೋತ್ತರ ಪರೀಕ್ಷಾ ವರದಿ ಬಂದ ಬೆನ್ನಲ್ಲೇ ಪ್ರಕರಣಕ್ಕೆ ಸಂಬಂಧಿಸಿ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಆಜಿಲ ನಿವಾಸಿ ಪುಷ್ಪಲತಾ ವಿ. ಶೆಟ್ಟಿ (65) ಗುರುವಾರ ಸಾವನ್ನಪ್ಪದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇವರ ಮುಖದಲ್ಲಿ ಉಗುರಿನಿಂದ ಪರಚಿದ ಗಾಯಗಳಿತ್ತು. ಅಲ್ಲದೇ ಮಹಿಳೆಯನ್ನು ಕತ್ತು ಹಿಡಿದು ಉಸಿರುಗಟ್ಟಿಸಿ ಕೊಲೆ ನಡೆಸಲಾಗಿದೆ ಎಂದು ಮರಣೋತ್ತರ ಪರೀಕ್ಷಾ ವರದಿ ಸೂಚಿಸಿತ್ತು. ಈ ಸಂಬಂಧ ಬದಿಯಡ್ಕ ಪೊಲೀಸರು ತನಿಖೆ ನಡೆಸಿ ಪೆರಡಾಲ ನಿವಾಸಿ ಪರಮೇಶ್ವರ ಯಾನೆ ರಮೇಶ (47) ಎಂಬಾತನನ್ನು ಬಂಧಿಸಿದ್ದಾರೆ.
ಸಾವನ್ನಪ್ಪಿದ ಮಹಿಳೆಯ ಕೊರಳಲ್ಲಿದ್ದ ನಾಲ್ಕು ಪವನ್ ತೂಕದ ಚಿನ್ನದ ಕರಿಮಣಿ ಸರ ಅಪಹರಿಸಲು ಕೊಲೆ ನಡೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮಧ್ಯರಾತ್ರಿ ಒಂಟಿ ಮಹಿಳೆಯ ಮನೆಗೆ ನುಗ್ಗಿ ಕರಿಮಣಿ ಅಪಹರಿಸುವ ಯತ್ನ ನಡೆದಾಗ ಮಹಿಳೆ ಪ್ರತಿರೋಧಿಸಿದ್ದು ಈ ವೇಳೆ ನಡೆದ ಘಟನೆಯ ಗುರುತು ಮನೆಯಿಂದ ಪತ್ತೆಯಾಗಿತ್ತು.


















