ಅ.24 : ವಿಶೇಷ ಕಾರ್ಯಪಡೆ ಸಿಬ್ಬಂದಿಗಳಿಗಾಗಿ ತುಳು ಭಾಷಾ ಕಲಿಕೆ ಮತ್ತು ಸಂಸ್ಕೃತಿ ಪರಿಚಯ ಕಾರ್ಯಗಾರ ಉದ್ಘಾಟನೆ

ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಮಂಗಳೂರಿನ ವಿಶೇಷ ಪೊಲೀಸ್ ಕಾರ್ಯಪಡೆಯ(ಎಸ್ .ಎ. ಎಫ್ ) ಸಿಬ್ಬಂದಿಗಳಿಗಾಗಿ 20 ದಿನಗಳ ತುಳು ಭಾಷಾ ಕಲಿಕೆ ಮತ್ತು ಸಂಸ್ಕೃತಿ ಪರಿಚಯ ಕಾರ್ಯಗಾರವನ್ನು ಹಮ್ಮಿಕೊಂಡಿದೆ.
ಇತ್ತೀಚೆಗೆ ಹೊಸದಾಗಿ ರಚಿಸಲ್ಪಟ್ಟ ವಿಶೇಷ ಕಾರ್ಯಪಡೆಯ ಸಿಬ್ಬಂದಿಗಳಿಗೆ ಸ್ಥಳೀಯ ಸಂಸ್ಕೃತಿ ಪರಿಚಯ ಮಾಡುವ ಹಾಗೂ ಭಾಷೆಯನ್ನು ಕಲಿಸುವ ನಿಟ್ಟಿನಲ್ಲಿ ಪೊಲೀಸ್ ಆಯುಕ್ತರಾದ ಸುಧೀರ್ ಕುಮಾರ್ ರೆಡ್ಡಿ ಅವರು ವಿಶೇಷ ಆಸಕ್ತಿ ವಹಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ತುಳು ಭಾಷಾ ಕಲಿಕಾ ಹಾಗೂ ಸಂಸ್ಕೃತಿ ಪರಿಚಯ ಕಾರ್ಯಗಾರವನ್ನು ಹಮ್ಮಿಕೊಂಡಿದೆ.

20 ದಿನಗಳ ಕಾಲ ನಡೆಯಲಿರುವ ಈ ಕಾರ್ಯಗಾರದಲ್ಲಿ ತುಳು ಭಾಷಾ ಸಂವಹನ ಕಲಿಕೆಯ ಜೊತೆಗೆ ತುಳುನಾಡಿನ ಸಂಸ್ಕೃತಿ ಹಾಗೂ ಜಾನಪದ ಆಚರಣೆ ಮತ್ತು ವಿಶೇಷತೆಗಳ ಬಗ್ಗೆ ವಿಷಯ ತಜ್ಞರುಗಳು ಮಾಹಿತಿ ನೀಡಲಿದ್ದಾರೆ. ಪ್ರತಿದಿನ ಸಂಜೆ 5.00ರಿಂದ 6.00 ಗಂಟೆ ತನಕ ಕಾರ್ಯಗಾರ ನಡೆಯಲಿದೆ.
ಅಕ್ಟೋಬರ್ 24ರಂದು ಸಂಜೆ 4 ಗಂಟೆಗೆ ಪೊಲೀಸ್ ಆಯುಕ್ತರ ಕಚೇರಿಯ ಸಭಾಂಗಣದಲ್ಲಿ ಈ ಕಾರ್ಯಗಾರವನ್ನು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ ಅವರು ಉದ್ಘಾಟಿಸಲಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅವರು ಅಧ್ಯಕ್ಷತೆ ವಹಿಸುವರು. ಪೊಲೀಸ್ ಆಯುಕ್ತರು ಹಾಗೂ ವಿಶೇಷ ಕಾರ್ಯಪಡೆಯ ಡಿಐಜಿಪಿ ಸುಧೀರ್ ಕುಮಾರ್ ರೆಡ್ಡಿ, ವಿಶೇಷ ಕಾರ್ಯಪಡೆಯ ಪ್ರಭಾರ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಕೆ.ಯು ಅವರು ಗೌರವ ಉಪಸ್ಥಿತರಿರುವರು ಎಂದು ಅಕಾಡೆಮಿಯ ಪ್ರಕಟಣೆ ತಿಳಿಸಿದೆ.