ಎಲ್ ಕೆಜಿ, ಪಿಯುಸಿ ಮಕ್ಕಳಿಗೂ ಮಧ್ಯಾಹ್ನದ ಬಿಸಿಯೂಟ ವಿಸ್ತರಣೆ: ಮಧು ಬಂಗಾರಪ್ಪ
ಅಪೌಷ್ಟಿಕತೆ ಹೋಗಲಾಡಿಸಿ ಮಕ್ಕಳ ಕಲಿಕೆಗೆ ನೆರವಾಗಲು ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಪೂರ್ವ ಪ್ರಾಥಮಿಕ ಹಾಗೂ ಪದವಿಪೂರ್ವ (ಪಿಯುಸಿ) ವಿದ್ಯಾರ್ಥಿಗಳಿಗೂ ವಿಸ್ತರಿಸಲಾಗುವುದು’ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸರ್ಕಾರಿ ಶಾಲೆಗಳಲ್ಲಿ ಎಲ್ ಕೆಜಿ ಹಾಗೂ ಯುಕೆಜಿ ಓದುವ ಹಾಗೂ ಪಿಯುಸಿ ಓದುವ ಎಲ್ಲಾ ಮಕ್ಕಳಿಗೂ ನೆರವಾಗಲಿದೆ. ಇದರಿಂದ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಹೆಚ್ಚುವರಿಯಾಗಿ ,₹200 ಕೋಟಿ ವೆಚ್ಚವಾಗಲಿದೆ’ ಎಂದರು.
ಹೊಸದಾಗಿ ಆರಂಭವಾಗುವ ಶಾಲೆಗಳು ಸೇರಿದಂತೆ ರಾಜ್ಯದ ಎಲ್ಲ ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಸಂಗೀತ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಕ ಮಾಡಲಾಗುವುದು. ಸರ್ಕಾರಿ ಶಾಲೆಗಳಲ್ಲಿ ಸ್ಕೂಲ್ ಬ್ಯಾಂಡ್ ಕಡ್ಡಾಯವಾಗಿ ಆರಂಭಿಸಲಾಗುವುದು ಎಂದರು.
ಹೊಸದಾಗಿ ಆರಂಭಿಸಲಾಗುತ್ತಿರುವ 900 ಕೆಪಿಎಸ್ ಶಾಲೆಗಳಿಗೆ ಜನವರಿ ಅಂತ್ಯದ ವೇಳೆಗೆ ಶಿವಮೊಗ್ಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ಪುನರುಚ್ಚರಿಸಿದ ಸಚಿವರು, ಹೊಸದಾಗಿ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಲು ಹಾಗೂ ಶಿಕ್ಷಕರ ನೇಮಕಾತಿಗೆ ಇಲಾಖೆಯಲ್ಲಿ ಯಾವುದೇ ರೀತಿಯ ಹಣದ ಸಮಸ್ಯೆ ಇಲ್ಲ ಎಂದರು.

















