ದಾನಿಗಳ ನೆರವನ್ನು ಎದುರು ನೋಡುತ್ತಿದೆ ಅನಾರೋಗ್ಯದಿಂದ ಬಳಲುತ್ತಿರುವ ಬಡ ಕುಟುಂಬ

ಬಂಟ್ವಾಳ: ಅನಾರೋಗ್ಯದಿಂದ ಬಳಲುತ್ತಿರುವ ಬಡ ಕುಟುಂಬವೊಂದು ಚಿಕಿತ್ಸೆಗಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು ದಾನಿಗಳ ನೆರವನ್ನು ಎದುರು ನೋಡುತ್ತಿದೆ. ಈ ಮನೆಯಲ್ಲಿ ವಾಸವಿರುವ ಮೂರು ಮಂದಿಯನ್ನು ಆರೋಗ್ಯ ಸಮಸ್ಯೆ ಕಾಡುತ್ತಿದ್ದು ಮುಂದೇನು ಎನ್ನುವ ದಾರಿ ಕಾಣದೆ ಕಂಗೆಟ್ಟಿದ್ದಾರೆ.

ಬಂಟ್ವಾಳ ತಾಲೂಕಿನ ಕೊಯಿಲ ಗ್ರಾಮದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಸೇಸಮ್ಮ ಪೂಜಾರ್ತಿಯವರದ್ದು ಬಡ ಕುಟುಂಬ. ಸೇಸಮ್ಮ ಅವರ ಹಿರಿಯ ಮಗಳು ವೇದ ಎಲ್ಲರಂತೆ ಲವಲವಿಕೆಯಿಂದ ಒಡಾಡುತ್ತಾ, ಬೀಡಿ ಕಟ್ಟುವ ಕೆಲಸ ನಿರ್ವಹಿಸುತ್ತಿದ್ದರು. ತನ್ನ ಮಗಳ ಹೆರಿಗೆಯ ಬಳಿಕ ಈಕೆಗೆ ವಿಚಿತ್ರ ಕಾಯಿಲೆ ಕಾಣಿಸಿಕೊಂಡು ಕೈ ತಿರುಚಿಕೊಂಡು, ಬೆರಳುಗಳು ಸುರುಟಿಕೊಳ್ಳಲು ಪ್ರಾರಂಭಿಸಿತು. ಸಾಕಷ್ಟು ಔಷಧೋಪಾಚಾರವನ್ನು ಮಾಡಿದರೂ ದೇಹ ಮೊದಲಿನ ಸ್ಥಿತಿಗೆ ಮರಳಲಿಲ್ಲ.

ಸೊಂಟದಭಾಗವೂ ಶಕ್ತಿ ಕಳೆದುಕೊಂಡು ಹೆಚ್ಚಿನ ಸಮಯವನ್ನು ಮಲಗಿದ್ದಲ್ಲಲಿಯೇ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇವರು ಪತಿಯನ್ನು ಕಳಕೊಂಡಿದ್ದು ಮನೆಗೆಲಸ, ದೈನಂದಿನ ಚಟುವಟಿಕೆಗಳಿಗೆ ಇತರರನ್ನು ಆಶ್ರಯಿಸಬೇಕಾದ ಅನಿರ್ವಾಯತೆ ಒದಗಿದೆ. ಇತ್ತೀಚಿನ ದಿನಗಳಲ್ಲಿ ಇವರನ್ನು ಹೃದಯ ಸಂಬಂಧಿ ರೋಗವೂ ಕಾಡುತ್ತಿದ್ದು ದಾನಿಗಳ ಆರ್ಥಿಕ ಸಹಕಾರದಿಂದ ಒಂದು ಬಾರಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಮುಂದಿನ ಚಿಕಿತ್ಸೆಗೆ ಹಣಕಾಸಿನ ತೊಂದರೆ ಎದುರಾಗಿರುವುದರಿಂದ ಮತ್ತೆ ಆಸ್ಪತ್ರೆಯತ್ತ ಮುಖಮಾಡಿಲ್ಲ. ಇವರ ಮಗಳು ಪೂರ್ಣಿಮ ಹುಟ್ಟಿನಿಂದಲೂ ಬುದ್ದಿಮಾಂದ್ಯಳಾಗಿದ್ದು ಆಕೆಯೂ ದೈನಂದಿನ ಕೆಲಸಗಳಿಗೆ ಪರರನ್ನು ಅವಲಂಬಿಸಬೇಕಾದ ಪರಿಸ್ಥಿತಿ ಇದೆ. 75 ವರ್ಷದ ತಾಯಿ ಸೇಸಮ್ಮ ಮಗಳು ಹಾಗೂ ಮೊಮ್ಮಗಳ ಸೇವೆ ಮಾಡುತ್ತಿದ್ದರು, ಇದೀಗ ಅವರಿಗೂ ಆರೋಗ್ಯ ಸಮಸ್ಯೆ ಕಾಡಲಾರಂಭಿಸಿದ್ದು ಕೆಮ್ಮು , ದಮ್ಮು ಕಾಡುತ್ತಿದೆ. ಇತ್ತೀಚೆಗೆ ಸ್ಕ್ಯಾನಿಂಗ್ ಮಾಡಿಸಿದಾಗ ಕಿಡ್ನಿ ಸಮಸ್ಯೆ ಇರುವುದಾಗಿ ವೈದ್ಯರು ತಿಳಿಸಿದ್ದಾರೆ. ಸರಕಾರದಿಂದ ಬರುವ ಅಂಗವಿಕಲ ವೇತನ ಹಾಗೂ ವೃದ್ದಾಪ್ಯ ವೇತನ ಹಾಗೂ ಧರ್ಮಸ್ಥಳದ ಗ್ರಾಮಾಭಿವೃದ್ದಿ ಯೋಜನೆಯ ಪಿಂಚಣಿಯಲ್ಲಿ ಬದುಕುತ್ತಿರುವ ಈ ಕುಟುಂಬಕ್ಕೆ ಜೀವನವೇ ದುಸ್ತರವಾಗಿದೆ. ಮನೆಯ ಬಾಡಿಗೆ ಪಾವತಿಸಲು, ದಿನ ಬಳಕೆ ವಸ್ತು ತರಲು ಸಂಕಷ್ಟ ಪಡುತ್ತಿರುವ ಈ ಕುಟುಂಬಕ್ಕೆ ರೋಗಕ್ಕೆ ಚಿಕಿತ್ಸೆ ಪಡೆಯುವುದು ಸವಾಲಾಗಿದ್ದು ದಾನಿಗಳ ನೆರವಿಗಾಗಿ ಕೈ ಚಾಚಿದ್ದಾರೆ. ನೆರವು ನೀಡುವವರು ಸೇಸಮ್ಮ ಅವರ ಖಾತೆ ಬ್ಯಾಂಕ್ ಖಾತೆಗೆ ಹಣ ಸಂದಾಯ ಮಾಡಬಹುದಾಗಿದೆ.

ಕರ್ನಾಟಕ ಬ್ಯಾಂಕ್,
ಅಮ್ಟಾಡಿ ಶಾಖೆ,
ಖಾತೆ ಸಂಖ್ಯೆ 0112500100416401
ಐಎಫ್‌ಎಸ್‌ಸಿ ಕೋಡ್ KARB0000011

ಮೊಬೈಲ್ ನಂಬರ್: 82776 55107

Related Posts

Leave a Reply

Your email address will not be published.