ಕಾಂಗ್ರೆಸ್ ಒಳಜಗಳ- ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸೋಮಶೇಖರ್ ಕೊಯಿಂಗಾಜೆ ರಾಜೀನಾಮೆ
ಸಂಪಾಜೆ: ಮುಂಬರುವ ಪಂಚಾಯತ್ ಚುನಾವಣೆಗಳ ಹೊಸ್ತಿಲಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಂಪಾಜೆ ವಲಯದಲ್ಲಿ ದೊಡ್ಡ ಆಘಾತ ಎದುರಾಗಿದೆ. ದೀರ್ಘಕಾಲದಿಂದ ವಲಯ ಕಾಂಗ್ರೆಸ್ ಘಟಕವನ್ನು ಮುನ್ನಡೆಸುತ್ತಿದ್ದ ಹಿರಿಯ ನಾಯಕ ಸೋಮಶೇಖರ್ ಕೊಯಿಂಗಾಜೆ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಪಕ್ಷದ ಒಳಚಟುವಟಿಕೆಗಳ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ಆರಂಭವಾಗಿದೆ.
ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಜೀನಾಮೆಯ ಘೋಷಣೆ ಮಾಡಿದ ಅವರು, ಸುಮಾರು 28 ವರ್ಷಗಳ ಕಾಲ ಸಂಪಾಜೆ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿದ ಅನುಭವ ನನಗಿದೆ ಎಂದರು. ಆದರೆ ಮುಂಬರುವ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗಳ ಪೂರ್ವಭಾವಿ ತಯಾರಿಯ ಹೊಣೆಗಾರಿಕೆ ತನ್ನ ಮೇಲೆ ಇದ್ದರೂ, ವೈಯಕ್ತಿಕ, ಆರ್ಥಿಕ ಹಾಗೂ ಆರೋಗ್ಯ ಸಮಸ್ಯೆಗಳ ಕಾರಣದಿಂದ ಮುಂದುವರಿಯಲು ಸಾಧ್ಯವಿಲ್ಲವೆಂದು ಸ್ಪಷ್ಟಪಡಿಸಿದರು.
ಆದರೆ ಪಕ್ಷದೊಳಗಿನ ಅಸಮಾಧಾನ, ನಾಯಕತ್ವ ಬದಲಾವಣೆಯ ಒತ್ತಡ, ಹಾಗೂ ಒಳಜಗಳಗಳೇ ರಾಜೀನಾಮೆಗೆ ನಿಜವಾದ ಕಾರಣವೇ? ಎಂಬ ಪ್ರಶ್ನೆಗಳು ಸ್ಥಳೀಯ ರಾಜಕೀಯದಲ್ಲಿ ಎದ್ದುಕಾಣುತ್ತಿವೆ. ಪಕ್ಷವನ್ನು ಮುಂದಕ್ಕೆ ಕೊಂಡೊಯ್ಯಲು ಸಮರ್ಥ ನಾಯಕನ ಅಗತ್ಯವಿದೆ ಎಂದು ಹೇಳಿರುವುದು, ಪ್ರಸ್ತುತ ಪಕ್ಷದ ಕಾರ್ಯವೈಖರಿಯ ಮೇಲಿನ ಅಸಮಾಧಾನದ ಸೂಚನೆಯೆಂದೂ ವಿಶ್ಲೇಷಿಸಲಾಗುತ್ತಿದೆ.
ಸೋಮಶೇಖರ್ ಕೊಯಿಂಗಾಜೆ ಅವರ ರಾಜೀನಾಮೆಯನ್ನು ತಕ್ಷಣ ಅಂಗೀಕರಿಸಿ ಹೊಸ ನಾಯಕತ್ವ ಘೋಷಣೆ ಮಾಡುವಂತೆ ಒತ್ತಡ ಹೆಚ್ಚಾಗಿದ್ದು, ಸಂಪಾಜೆ ವಲಯ ಕಾಂಗ್ರೆಸ್‌ನಲ್ಲಿ ರಾಜಕೀಯ ಗದ್ದಲ ಮತ್ತಷ್ಟು ತೀವ್ರಗೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ.
ಮುಂದಿನ ದಿನಗಳಲ್ಲಿ ಈ ಬೆಳವಣಿಗೆ ಕಾಂಗ್ರೆಸ್ ಪಕ್ಷದ ಚುನಾವಣಾ ತಂತ್ರಗಳ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.


















