ಮೋದಿಯವರ ಒಂದು ಕಾರ್ಯಕ್ರಮಕ್ಕೆ 33 ಕೋಟಿ ರೂ. ವ್ಯಯ: ಮಾಹಿತಿ ಹಕ್ಕಿನಡಿ ಬಹಿರಂಗ
ಕಳೆದ ಲೋಕ ಸಭೆ ಚುನಾವಣೆಗೆ ಮೊದಲಿನ ಪ್ರಧಾನಿ ಮೋದಿಯವರ ಒಂದು ಕಾರ್ಯಕ್ರಮಕ್ಕೆ 33 ಕೋಟಿ ಹಾಗೂ ಅದಕ್ಕೆ ಜನರನ್ನು ಕರೆತರಲು 6.5 ಕೋಟಿ ರೂಪಾಯಿ ವ್ಯಯಿಸಿದ್ದು, ಮಾಹಿತಿ ಹಕ್ಕಿನಿಂದ ತಿಳಿದು ಬಂದಿದೆ.

ಲಂಚ ಮುಕ್ತ ಕರ್ನಾಟಕ ಸಂಸ್ಥೆಯ ಮಂಜುನಾಥ ಹಿರೇ ಚೌಟ ಅವರು ಮಾಹಿತಿ ಹಕ್ಕಿನಡಿ ಮಡೆದಿರುವ ಮಾಹಿತಿಯ ಪ್ರಕಾರ ಬಿಜೆಪಿಯವರು ಯಾವುದೇ ನಿಯಮಾವಳಿ ಪಾಲಿಸದೆ ಚುನಾವಣೆ ಕಾಲದಲ್ಲಿ ಹಣ ವ್ಯಯಿಸುತ್ತಾರೆ. ಚುನಾವಣೆಯ ವೆಚ್ಚದ ಬಗೆಗೆ ಕಾನೂನು ಇದ್ದರೂ ದುಂದು ವೆಚ್ಚ ಹಾಗೂ ಅಡ್ಡ ದಾರಿಯ ವೆಚ್ಚವನ್ನು ತಡೆಯುವುದು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.

2023ರ ಫೆಬ್ರವರಿಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಮಾಡಿದ ಖರ್ಚು 18.81 ಕೋಟಿ ರೂಪಾಯಿ. ಈ ಕಾರ್ಯಕ್ರಮಕ್ಕೆ 4.11 ಕೋಟಿ ರೂಪಾಯಿ ವ್ಯಯಿಸಿ 1,800 ಬಸ್ಸುಗಳಲ್ಲಿ ಜನರನ್ನು ಕರೆತರಲಾಗಿತ್ತು. ಅದರ ಬೆನ್ನಿಗೇ ಬೆಳಗಾವಿಯಲ್ಲಿ 14.35 ಕೋಟಿ ರೂಪಾಯಿ ವೆಚ್ಚದಲ್ಲಿ ಒಂದು ಕಾರ್ಯಕ್ರಮ ನಡೆಯಿತು. ಅದಕ್ಕೆ ಜನರನ್ನು ಕರೆತರಲು 2.5 ಕೋಟಿ ರೂಪಾಯಿ ವ್ಯಯಿಸಲಾಗಿತ್ತು.

ಲೋಕ ಸಭೆ ಚುನಾವಣೆಗೆ ಮೊದಲಿನ ಈ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ವೆಚ್ಚದ ಪಾರದರ್ಶಕತೆಯಾಗಲಿ, ಉತ್ತರದಾಯಿತ್ವವಾಗಲಿ ಕಂಡುಬಂದಿಲ್ಲ ಎನ್ನುತ್ತಾರೆ ಹಿರೇಚೌಟ. ಸಾರ್ವಜನಿಕ ಅಭಿವೃದ್ಧಿ ಕೆಲಸಗಳನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡುದಲ್ಲದೆ, ಆಗಿನ ಲೋಕೋಪಯೋಗಿ ಮಂತ್ರಿ ಸಿ. ಸಿ. ಪಾಟೀಲರು, ವೆಚ್ಚದ ಖಚಿತ ನೆನಪು ಇಲ್ಲ ಎಂದಿದ್ದರು. ಇಂತಾ ವೆಚ್ಚಗಳ ಮೇಲೆ ಮಿತಿ ವಿಧಿಸಲು ಪ್ರಯತ್ನಿಸಲಾಗುವುದು. ಮಾಹಿತಿ ಹಕ್ಕಿನಡಿ ಸಿಕ್ಕಿರುವುದು ದಿಗಿಲೂಡುವ ಕೆಲವು ಮಾಹಿತಿಗಳು. ಕಡತ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು; ಅದು ಅಷ್ಟು ಸುಲಭವಂತೂ ಅಲ್ಲ ಎಂದು ಈಗಿನ ಲೋಕೋಪಯೋಗಿ ಮಂತ್ರಿ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.


















