ಆಳ್ವಾಸ್ ಜಾಂಬೂರಿಯಲ್ಲಿ ಬಣ್ಣದ ಬಣ್ಣದ ಹೂ-ಗಿಡಗಳ ಲೋಕ ಸೃಷ್ಟಿ

ವಿದ್ಯಾಗಿರಿಯ ಆಳ್ವಾಸ್ ನ ಕ್ಯಾಂಪಸ್ ನ ಆವರಣದಲ್ಲಿ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಆರಂಭಗೊಳ್ಳಲು ಇನ್ನು ಒಂದು ದಿನವಷ್ಟೇ ಬಾಕಿಯಿದೆ. ಆದರೆ ವಿವಿಧ ಜಾತಿಯ ಬಣ್ಣ ಬಣ್ಣದ ಹೂ-ಗಿಡಗಳಿಂದ ತುಂಬಿದ ಲೋಕವೊಂದು ಈಗಾಗಲೇ ಸೃಷ್ಟಿಯಾಗುವ ಮೂಲಕ ಕಣ್ಮನ ಸೆಳೆಯುತ್ತಿದೆ. ವಿವಿಧ ರಾಷ್ಟ್ರಗಳಿಂದ ಬರುವ ವಿದ್ಯಾರ್ಥಿಗಳು ತರಬೇತುದಾರರಿದ್ದಾರೆ. ಪ್ರದರ್ಶನಗೊಳ್ಳುವ ಕಲಾ ವೈಭವಗಳೂ ಅಷ್ಟೇ… ಅದೂ ಅಂತಾರಾಷ್ಟ್ರೀಯಕ್ಕೆ ಒತ್ತು ನೀಡಲಾಗಿದೆ. ಜೊತೆಗೆ ಇಲ್ಲಿರುವ ಸಸ್ಯೋದ್ಯಾನವೂ ಇದರಿಂದ ಹೊರತಾಗಿಲ್ಲ…!

ದೇಶದ ವಿವಿಧ ರಾಜ್ಯಗಳ, ಅತ್ಯಪೂರ್ವ ಸಸ್ಯ ಸಂಪತ್ತಿನೊಂದಿಗೆ, ಹೊರದೇಶಗಳ ಅದ್ಭುತ ಆಕರ್ಷಕ ಹೂವಿನ ಗಿಡಗಳು ಮೂಡುಬಿದಿರೆಯ ನೆಲದಲ್ಲಿ ತನ್ನ ಸೊಗಸನ್ನು ಪ್ರದರ್ಶಿಸತೊಡಗಿದೆ. ಇಲ್ಲಿನ ಹವಾಮಾನ, ಇಲ್ಲಿನ ವಾತಾವರಣದಲ್ಲಿ ಅಸಾಧ್ಯ ಎಂಬಂತಿರುವ ಸಸ್ಯಗಳೂ ಇಂದು ಸಮೃದ್ಧವಾದ ಹೂವಿನ ರಾಶಿಯೊಂದಿಗೆ ವಯ್ಯಾರದಿಂದ ಬಾಗಿ ಬಳುಕಿ ಆಕರ್ಷಕವಾಗಿ ಕಂಗೊಳಿಸುತ್ತಿವೆ.

ಕಿರಿಯರಿಂದ ಹಿಡಿದು ವೃದ್ಧವರೆಗೆ ಪ್ರತಿಯೊಬ್ಬರೂ ಕೂಡಾ ಹೂಗಳ ಸೌಂದರ್ಯಕ್ಕೆ ಮಾರು ಹೋಗುವವರೆ. ಇಡೀ ನೂರೆಕ್ಕರೆ ಆವರಣದಲ್ಲಿ ಎಲ್ಲಿ ನೋಡಿದರಲ್ಲಿ ವರ್ಣ ವೈವಿಧ್ಯದ ಹೂಗಳು ತನ್ನ ಸೌಂದರ್ಯ ಪ್ರದರ್ಶನ ನೀಡುತ್ತಾ ಎಲ್ಲರನ್ನು ತನ್ನತ್ತ ಆಕರ್ಷಿಸಲು ಕಾತರದಿಂದ ಕಾಯುತ್ತಿದೆ. 25ವಿವಿಧ ತಳಿಗಳ 7 ರಿಂದ 10ವರ್ಷದ 300 ಅತ್ಯಂತ ವಿರಳ ಗಿಡಗಳು ಈ ಪುಷ್ಪಮೇಳದಲ್ಲಿ ಪ್ರಧಾನ ಆಕರ್ಷಣೆಗೆ ಪಾತ್ರವಾಗಲಿದೆ. ಒಂದು ನಿರ್ದಿಷ್ಟ ಅವಧಿಯಲ್ಲಷ್ಟೇ ಪುಷ್ಪಗಳಿಂದ ಶೃಂಗಾರಗೊಳ್ಳುವ 35ಜಾತಿಗಳ 5000 ಪುಟಾಣಿ ಸಸ್ಯಗಳು ಆಕರ್ಷಕವಾಗಿ ಕಂಗೊಳಿಸಿವೆ. ಪುಟಾಣಿಗಳನ್ನು ತನ್ನತ್ತ ಆಕರ್ಷಿಸುವ ಆನೆ,ಹುಲಿ, ಚಿಟ್ಟೆ,ಕುದುರೆ, ಜಿರಾಫೆ, ಮಂಗ,ಹಂಸ,ಜಾಂಬೂರಿಯ ಲಾಂಛನಗಳನ್ನೊಳಗೊಂಡ ಪುಷ್ಪ ?ಮಾದರಿ? ಈ ಮೇಳದ ಮತ್ತೊಂದು ವೈಶಿಷ್ಟ್ಯ!. ಇಂತಹ ನೂರರಷ್ಟು ಆಕೃತಿಗಳು ಪುಷ್ಪ ಪ್ರದರ್ಶನದ ದೊಡ್ಡ ಆಕರ್ಷಣೆಯ ಕೇಂದ್ರವಾಗಿದೆ.

ಎರಡು ಲಕ್ಷಗಳಷ್ಟು ವಿದೇಶೀ ಸಸ್ಯಗಳು ಇದೀಗ ಮೂಡುಬಿದಿರೆಯಲ್ಲಿ ತನ್ನ ಸೌಂದರ್ಯ ಪ್ರದರ್ಶಿಸಲಾರಂಭಿಸಿವೆ. ಅಮೆರಿಕಾ, ಹಾಲೆಂಡ್, ಜಪಾನ್, ಮಲೇಷ್ಯಾ, ಥಾಯ್ಲ್ಯಾಂಡ್ ಮೊದಲಾದ ಕಡೆಗಳಿಂದ ಹೂಗಿಡಗಳ ಬೀಜಗಳನ್ನು ತಂದು ಬೆಳಗಾಂ ಹಾಗೂ ಪೂನದಲ್ಲಿ ಸಸ್ಯಾಭಿವೃದ್ಧಿಗೊಳಿಸಿ ಅಲ್ಲಿಂದ ವಿದ್ಯಾಗಿರಿಯ ಸಸ್ಯಪ್ರದರ್ಶನಕ್ಕೆ ತರಲಾಗುತ್ತಿದೆ. ಸುಮಾರು ಎರಡು ಲಕ್ಷ ಸಸ್ಯಗಳು ಅಲ್ಲಿಂದ ಇಲ್ಲಿಗೆ ಆಗಮಿಸಿವೆ!. ವಿವಿಧ ವರ್ಣಗಳ ಅಪರೂಪದ ಲಿಲ್ಲಿ ಗಿಡಗಳು, ಚೆಂಡು ಹೂವು, ಜೀನಿಯಾ, ಗುಲಾಬಿ ಸೇರಿದಂತೆ ಹಲವು ಆಕರ್ಷಕ ಕ್ರೋಟನ್ ಮಾದರಿ ಗಿಡಗಳು ಪ್ರದರ್ಶನಕ್ಕೆ ಇನ್ನಷ್ಟು ಮೆರುಗು ನೀಡುತ್ತಿವೆ.

300000 ಹೂಗಿಡಗಳು: ಇಡೀ ಪ್ರದರ್ಶನದಲ್ಲಿ ಮೂರು ಲಕ್ಷಕ್ಕೂ ಅಧಿಕ ಹೂಗಿಡಗಳು ಇವೆ. ವಿದ್ಯಾಗಿರಿ ಕ್ಯಾಂಪಸ್‍ನ ಖಾಲಿ ಜಾಗಗಳಲ್ಲಿ ಕೆಂಪು, ಕೇಸರಿ, ಹಳದಿ ಗೊಂಡೆಹೂವುಗಳು ಸುಂದರ ಹೂವಿನೊಂದಿಗೆ ಕಂಗೊಳಿಸುತ್ತಿವೆ.

Related Posts

Leave a Reply

Your email address will not be published.