“BSWT” ವರ್ಷದ ವ್ಯಕ್ತಿ ಪ್ರಶಸ್ತಿಗೆ- ಚಿತ್ರ ನಟ ಅರವಿಂದ್ ಬೋಳಾರ್ ಆಯ್ಕೆ. 

ಭಾರತ್ ಸೋಶಿಯಲ್ ವೆಲ್ಫೇರ್ ಟ್ರಸ್ಟ್ “BSWT” ವರ್ಷದ ವ್ಯಕ್ತಿ ಪ್ರಶಸ್ತಿಗೆ ಚಿತ್ರ ನಟ ಅರವಿಂದ್ ಬೋಳಾರ್ ರವರು ಆಯ್ಕೆಯಾಗಿದ್ದಾರೆ. ಅರವಿಂದ ಬೋಳಾರ್ ಅವರು ತುಳು ನಾಟಕ, ಚಲನಚಿತ್ರ ಮತ್ತು ಯಕ್ಷಗಾನ ರಂಗದ ಪ್ರಮುಖ ಕಲಾವಿದರಲ್ಲಿ ಒಬ್ಬರು. ಕನ್ನಡ, ಕೊಂಕಣಿ ಮಲೆಯಾಳಂ ಭಾಷಾ ಸಿನಿಮಾದಲ್ಲಿ ಅಭಿನಯಿಸುತ್ತಾ ಬ್ಯಾರಿ ಭಾಷಾ ಪಾತ್ರದಲ್ಲಿಯೂ ಸೈ ಎನಿಸಿಕೊಂಡವರು.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಬೋಳಾರ್ ಎಂಬಲ್ಲಿ ತಂದೆ ಕೃಷ್ಣಪ್ಪ ಮತ್ತು ತಾಯಿ ಸುಂದರಿಯವರ ಮಗನಾಗಿ ಜನಿಸಿದ ಇವರು ತುಳು ನಾಟಕ ಕಲಾವಿದನಾಗಿ ಸಾಂಸ್ಕೃತಿಕ ರಂಗ ಪ್ರವೇಶಿಸಿದರು. ಹಾಗೂ ತುಳು ಚಲನಚಿತ್ರ ರಂಗದ ಪ್ರಮುಖ ಕಲಾವಿದರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ತಮ್ಮ ಕಾಮಿಕ್ ಟೈಮಿಂಗ್ ಮತ್ತು ಪಂಚಿಂಗ್ ಡೈಲಾಗ್‌ಗಳಿಂದ ಅವರು ಕರಾವಳಿ ನಾಟಕ ಉದ್ಯಮದಲ್ಲಿ ಮತ್ತು ತುಳು ಚಿತ್ರರಂಗದಲ್ಲಿ ತಮ್ಮದೇ ಆದ ಸಹಿಯನ್ನು ರಚಿಸಿಕೊಂಡಿರುವ ಇವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯ ಜೊತೆಗೆ “ಸಾಧನೆ ಶಾರದಾರ್” ಮತ್ತು “ತುಳುವ ಮಾಣಿಕ್ಯ” ಎಂಬ ಬಿರುದು ಗಳಿಸಿದ್ದಾರೆ ಅದಲ್ಲದೆ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ೫೦೦ ಕ್ಕೂ ಹೆಚ್ಚು ಗೌರವಗಳು ಸಂದಿವೆ. 

ಸಾಮಾನ್ಯ ಜನರ ನೋವುಗಳನ್ನು ಅರಿತು ಅವರಂತೆ ಪಾತ್ರಾಭಿನಯಿಸಿ ಟಿವಿ ಶೋಗಳಲ್ಲಿ ತೆರೆ ಮೇಲೆ ತರುವ ಹೊಸ ಪ್ರಯೋಗದ ಮುಖಾಂತರ ಜನರ ಸಂಕಷ್ಟಗಳಿಗೆ ಸ್ಪಂದಿಸಿದರು. ಕೊರೋನಾ ಲಾಕ್ ಡೌನ್ ಸಂಧರ್ಭದಲ್ಲಿ ಇದು ಹೆಚ್ಚು ಪ್ರಯೋಜನಕಾರಿಯದ ಬೆಳವಣಿಗೆಯಾಗಿ ಗುರುತಿಸಲಾಗಿದ್ದು ಸಮಾಜದ ಕಣ್ಣು ತೆರೆಯಿತು. ಅವರ ಸಾಮಾಜಿಕ ಬದ್ಧತೆಯನ್ನು ಪರಿಗಣಿಸಿ ಭಾರತ್ ಸೋಶಿಯಲ್ ಆಂಡ್ ವೆಲ್ಫೇರ್ ಟ್ರಸ್ಟ್ ಅವರನ್ನು ವರ್ಷದ ವ್ಯಕ್ತಿಯಾಗಿ ಆಯ್ಕೆ ಮಾಡಿದೆ. ಭಾರತ್ ಸೋಶಿಯಲ್ ಆಂಡ್ ವೆಲ್ಫೇರ್ ಟ್ರಸ್ಟ್ ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ಈ ಮೂರು ಕೇಂದ್ರೀಯ ವಿಷಯಗಳಲ್ಲಿ ಕಳೆದ ಎಂಟು ವರ್ಷಗಳಿಂದ ಕರ್ನಾಟಕದಾದ್ಯಂತ ವಿವಿಧ ಸೇವಾ ಕಾರ್ಯಗಳನ್ನು ಮಾಡುತ್ತಾ ಪ್ರತೀ ವರ್ಷ ನೂರೈವತ್ತು ಅರ್ಹ ಬಡಾ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ನೀಡುತ್ತಾ ಬಂದಿದೆ. ಪ್ರಸಕ್ತ ವರ್ಷದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಜನವರಿ 26- 2023 ರಂದು ಸಂಜೆ 3.00 ಗಂಟೆಗೆ ಸರಿಯಾಗಿ ಸಹೋದಯ ಸಭಾಂಗಣ ಬಲ್ಮಟ ಮಂಗಳೂರು ಇಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಅರವಿಂದ್ ಬೋಳಾರ್ ಅವರಿಗೆ “ವರ್ಷದ ವ್ಯಕ್ತಿ” ಪ್ರಶಸ್ತಿ ನೀಡಿ ಗೌರವಿಸಲಾಗುವುದೆಂದು ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಆಕಿಫ್ ಇಂಜಿನಿಯರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Posts

Leave a Reply

Your email address will not be published.