‘ಬಲೆ ತುಳು ಓದುಗ’ ಅಭಿಯಾನ: ಆ.9 ರಂದು ಅಕಾಡೆಮಿಗೆ ರೋಶನಿ ನಿಲಯ ವಿದ್ಯಾರ್ಥಿಗಳ ಭೇಟಿ

ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ವಿದ್ಯಾರ್ಥಿ, ಯುವಜನರಲ್ಲಿ ತುಳು ಸಾಹಿತ್ಯ ಓದಿನ ಅಭಿರುಚಿ ಮೂಡಿಸಲು ಹಮ್ಮಿಕೊಂಡಿರುವ ‘ಅಕಾಡೆಮಿಡ್ ಒಂಜಿ ದಿನ ; ಬಲೆ ತುಳು ಓದುಗ’ ಅಭಿಯಾನದ ಏಳನೇ ಕಾರ್ಯಕ್ರಮ ಆ.09 ರಂದು ನಡೆಯಲಿದೆ.
ಶನಿವಾರದಂದು ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯ ಕಾಲೇಜಿನ ಕನ್ನಡ ವಿಭಾಗದ 35 ವಿದ್ಯಾರ್ಥಿಗಳು ಉರ್ವಾಸ್ಟೋರ್ ನಲ್ಲಿರುವ ತುಳು ಭವನದ ಗ್ರಂಥಾಲಯಕ್ಕೆ ಭೇಟಿ ನೀಡಿ ಅಧ್ಯಯನ ಹಾಗೂ ಸಂವಾದ ನಡೆಸುವರು.
ಕಾರ್ಯಕ್ರಮವನ್ನು ಬೆಳಿಗ್ಗೆ 10.00 ಗಂಟೆಗೆ ಹಿರಿಯ ಲೇಖಕಿ ಹಾಗೂ ವಿಶ್ರಾಂತ ಪ್ರಾಂಶುಪಾಲರಾದ ಶ್ರೀಮತಿ ಚಂದ್ರಕಲಾ ನಂದಾವರ ಅವರು ಉದ್ಘಾಟಿಸಿ,ದಿಕ್ಸೂಚಿ ಮಾತನ್ನಾಡುವರು. ಮುಖ್ಯ ಅತಿಥಿಯಾಗಿ ವಾರ್ತಾಭಾರತಿ ದೈನಿಕದ ಹಿರಿಯ ವರದಿಗಾರ್ತಿಯಾದ ಸತ್ಯ ಕೆ. ಭಾಗವಹಿಸುವರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸುವರು. ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಓಬನಾಥ್ ಅತಿಥಿಯಾಗಿ ಭಾಗವಹಿಸುವರು ಎಂದು ಅಕಾಡೆಮಿಯ ಪ್ರಕಟಣೆ ತಿಳಿಸಿದೆ.
