ಬೈಂದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ ನಾಮಪತ್ರ ಸಲ್ಲಿಕೆ

ಕುಂದಾಪುರ: ನನ್ನ ರಾಜಕೀಯ ಜೀವನದಲ್ಲಿ ಒಂದೇ ಒಂದು ಭಯೋತ್ಪಾದನೆಗೆ ಬೆಂಬಲ ಕೊಟ್ಟಿರುವ ಕೇಸುಗಳಿದ್ದರೆ ತೋರಿಸಬೇಕು. ಇಲ್ಲವಾದಲ್ಲಿ ಈ ಕ್ಷೇತ್ರದ ಜನರೆದುರುವ ನೀವು ಕ್ಷಮೆ ಕೇಳಬೇಕು. ನಿಮ್ಮ ಹೇಳಿಕೆಗೆ ಕೇಸು ಹಾಕಲು ಹೋಗಲ್ಲ. ತಾಯಿ ಮೂಕಾಂಬಿಕೆ ಇದ್ದಾಳೆ. ನೀವು ಹೇಳಿರುವ ಮಾತು ಸತ್ಯವೋ, ಸುಳ್ಳೋ ಅವಳೇ ನಿರ್ಧರಿಸುತ್ತಾಳೆ. ನಿಮ್ಮ ಸುಳ್ಳುಗಳು ಇಲ್ಲಿಗೆ ಕೊನೆಯಾಗಬೇಕು ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ ಗುಡುಗಿದ್ದಾರೆ.

ಅವರು ಬೈಂದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮೊದಲು ಸಹಸ್ರಾರು ಕಾರ್ಯಕರ್ತರೊಂದಿಗೆ ಯಡ್ತರೆ ಬೈಪಾಸ್ ನಿಂದ ಪಾದಯಾತ್ರೆ ನಡೆಸಿ ಬಳಿಕ ಬೈಂದೂರು ಹೊಸ ಬಸ್ ನಿಲ್ದಾಣದ ಬಳಿ ನಡೆದ ಬೃಹತ್ ಬಹಿರಂಗಸಭೆಯಲ್ಲಿ ಸಚಿವ ಶ್ರೀನಿವಾಸ ಪೂಜಾರಿಯವರ ಭಯೋತ್ಪಾದಕರು ಹೇಳಿಕೆಯನ್ನು ಖಂಡಿಸಿ ಮಾತನಾಡಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಅಭಿವೃದ್ದಿಯಲ್ಲಿ ಎರಡನೇ ಸ್ಥಾನದಲ್ಲಿದ್ದ ಗೋಪಾಲ ಪೂಜಾರಿಯವರನ್ನು ಸುಳ್ಳು ಅಪಪ್ರಚಾರಗಳ ಮೂಲಕ ಕಳೆದ ಬಾರಿ ಸೋಲಿಸಲಾಯಿತು. ಆದರೆ ಈ ಬಾರಿ ರಾಜ್ಯದಲ್ಲೇ ಅತ್ಯಧಿಕ ಮತಗಳ ಅಂತರದಲ್ಲಿ ಗೋಪಾಲ ಪೂಜಾರಿಯವರನ್ನು ಗೆಲ್ಲಿಸುವ ಮೂಲಕ ಹಿಂದಿನ ಚುನಾವಣೆಯ ಸೋಲಿನ ಸೇಡು ತೀರಿಸಿಕೊಳ್ಳಬೇಕು ಎಂದರು.

ಜಿಲ್ಲಾ ಕಾಂಗ್ರೆಸ್ ವಕ್ತಾರ ವಿಕಾಸ್ ಹೆಗ್ಡೆ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಅಕ್ರಮ-ಸಕ್ರಮದಲ್ಲಿ ಅತೀಹೆಚ್ಚು ಭೂ ಮಂಜೂರು ಮಾಡಿರುವ ಏಕೈಕ ಶಾಸಕರಿದ್ದರೆ ಅದು ಗೋಪಾಲ ಪೂಜಾರಿಯವರು. ಇತ್ತೀಚೆಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಹೋದಲ್ಲೆಲ್ಲಾ ಕಾಂಗ್ರೆಸ್ ಗ್ಯಾರಂಟಿಗೆ ವ್ಯಾರಂಟಿ ಇಲ್ಲ ಎಂದು ವ್ಯಂಗ್ಯವಾಡುತ್ತಿದ್ದಾರೆ. ಆದರೆ ಶ್ರೀನಿವಾಸ ಪೂಜಾರಿಯವರ ಮಾತಿಗೆ ವ್ಯಾರಂಟಿ ಮತ್ತು ವ್ಯಾಲಿಡಿಟಿ ಎರಡೂ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಸಭೆಯಲ್ಲಿ ಬೈಂದೂರು ಬ್ಲಾಕ್ ಅಧ್ಯಕ್ಷ ಮದನ್ ಕುಮಾರ್, ವಂಡ್ಸೆ ಬ್ಲಾಕ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ಮುಖಂಡರಾದ ಎಸ್. ರಾಜು ಪೂಜಾರಿ, ಪ್ರಕಾಶ್ಚಂದ್ರ ಶೆಟ್ಟಿ, ವಿಜಯ್ ಶೆಟ್ಟಿ, ರಮೇಶ್ ಗಾಣಿಗ, ವಾಸುದೇವ ಯಡಿಯಾಳ, ರಘುರಾಮ ಶೆಟ್ಟಿ, ಸಂಪಿಗೇಡಿ ಸಂಜೀವ ಶೆಟ್ಟಿ, ಗೌರಿ ದೇವಾಡಿಗ, ಮಂಜುಳಾ ದೇವಾಡಿಗ, ಪ್ರಸನ್ನ ಕುಮಾರ್, ಅರವಿಂದ ಪೂಜಾರಿ ಮೊದಲಾದವರಿದ್ದರು.

Related Posts

Leave a Reply

Your email address will not be published.