ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನ : ನೂತನ ಬ್ರಹ್ಮ ರಥ ಲೋಕಾರ್ಪಣೆ ಕಾರ್ಯಕ್ರಮ

ಕುಂದಾಪುರ: ಜಗತ್ಪ್ರಸಿದ್ದ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದ ನೂತನ ಬ್ರಹ್ಮ ರಥವನ್ನು ಲೋಕಾರ್ಪಣೆ ಮಾಡಲಾಯಿತು.
ಕೋಟೇಶ್ವರದಿಂದ ಪುರ ಮೆರವಣಿಗೆಯಲ್ಲಿ ಕೊಲ್ಲೂರಿಗೆ ಬಂದಿದ್ದ ಬ್ರಹ್ಮ ರಥವನ್ನು ದೇವಸ್ಥಾನದ ಮುಂಭಾಗದಲ್ಲಿ ಇರಿಸಲಾಗಿದ್ದು, ಗುರುವಾರ ಬೆಳಿಗ್ಗೆ ಶುದ್ದಾದಿ ಕಾರ್ಯಗಳು ಮುಗಿದ ಬಳಿಕ ಬ್ರಹ್ಮ ರಥದ ಹಸ್ತಾಂತರ ಪ್ರಕ್ರಿಯೆಗೆ ಪೂರ್ವಭಾವಿಯಾಗಿ ಋತ್ವೀಜರ ನೇತೃತ್ವದಲ್ಲಿ ಹೋಮ ನಡೆಸಲಾಯಿತು. ಬಳಿಕ ಹಳೆಯ ರಥದ ವಿಸರ್ಜನೆ ಹಾಗೂ ಕಳೆ ಇಳಿಸುವ ಸಲುವಾಗಿ ಧಾರ್ಮಿಕ ವಿಧಿಗಳನ್ನು ನಡೆಸಿದ ಬಳಿಕ ನೂತನ ರಥಕ್ಕೆ ಕಳೆ ಏರಿಸುವ ಧಾರ್ಮಿಕ ಕಾರ್ಯಗಳು ನಡೆಯಿತು.

ದೇವಸ್ಥಾನದ ತಂತ್ರಿಗಳಾದ ಡಾ.ರಾಮಚಂದ್ರ ಅಡಿಗ ಹಾಗೂ ಹಿರಿಯ ಅರ್ಚಕ ಎನ್.ಗೋವಿಂದ ಅಡಿಗ ಅವರ ನೇತ್ರತ್ವದಲ್ಲಿ ಧಾರ್ಮಿಕ ಪ್ರಕ್ರಿಯೆಗಳನ್ನು ನಡೆಸಿ, ಬ್ರಹ್ಮ ರಥದ ಮೇಲ್ಭಾಗದಲ್ಲಿ ಆರತಿ ಬೆಳಗಲಾಯಿತು.

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ, ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಹೆಚ್ಚುವರಿ ಜಿಲ್ಲಾಧಿಕಾರಿ ವೀಣಾ ಬಿ.ಎನ್, ಬ್ರಹ್ಮ ರಥ ದಾನಿ ಸುನಿಲ್ ಆರ್ ಶೆಟ್ಟಿ, ಬಸ್ರೂರು ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ, ಮಂದರ್ತಿ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಧರ್ಮದರ್ಶಿ ಧನಂಜಯ ಶೆಟ್ಟಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತಗ್ಗರ್ಸೆ ಬಾಬು ಶೆಟ್ಟಿ, ರಥ ಶಿಲ್ಪಿಗಳಾದ ಕೆ.ಲಕ್ಷ್ಮೀನಾರಾಯಣ ಆಚಾರ್ಯ, ಕೆ.ಎಲ್.ರಾಜಗೋಪಾಲ ಆಚಾರ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಗಣೇಶ್ ಕಿಣಿ ಬೆಳ್ವೆ, ಗೋಪಾಲಕೃಷ್ಣ ನಾಡಾ, ಸಂಧ್ಯಾ ರಮೇಶ್, ರತ್ನಾ ರಮೇಶ್ ಕುಂದರ್, ಡಾ.ಅತುಲ್‍ಕುಮಾರ ಶೆಟ್ಟಿ, ಜಯಾನಂದ ಹೋಬಳಿದಾರ್, ಕೆ.ಪಿ.ಶೇಖರ , ಕೊಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವರಾಮಕೃಷ್ಣ ಭಟ್ ಇದ್ದರು.
