2022 ನೇ ಸಾಲಿನ ವಿಮಲಾ ವಿ. ಪೈ ವಿಶ್ವ ಕೊಂಕಣಿ ಪುರಸ್ಕಾರ ಪ್ರಕಟ

ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರವು ಕೊಡಮಾಡುವ ಅಖಿಲ ಭಾರತ ಮಟ್ಟದ ಕೊಂಕಣಿ ಸಾಹಿತ್ಯ ಪ್ರಶಸ್ತಿ ವಿಮಲಾ ವಿ. ಪೈ ವಿಶ್ವ ಕೊಂಕಣಿ ಸಾಹಿತ್ಯ ಪುರಸ್ಕಾರ 2021, ವಿಮಲಾ ವಿ. ಪೈ ವಿಶ್ವ ಕೊಂಕಣಿ ಕವಿತಾ ಕೃತಿ ಪುರಸ್ಕಾರ 2021 ಮತ್ತು ವಿಮಲಾ ವಿ. ಪೈ ವಿಶ್ವ ಕೊಂಕಣಿ ಜೀವನ ಸಿದ್ಧಿ ಸಮ್ಮಾನ 2022 ಗಳ ಪ್ರಕಟಣೆಯಾಗಿದೆ.

ವರ್ಷದ ಅತ್ಯುತ್ತಮ ಕೊಂಕಣಿ ಸಾಹಿತ್ಯ ಕೃತಿಗೆ ನೀಡಲಾಗುವ ಶ್ರೀಮತಿ ವಿಮಲಾ ವಿ. ಪೈ ವಿಶ್ವ ಕೊಂಕಣಿ ಸಾಹಿತ್ಯ ಪುರಸ್ಕಾರ 2022 ಕ್ಕೆ ಗೋವಾದ ಪ್ರಸಿದ್ಧ ಕೊಂಕಣಿ ಲೇಖಕಿ ಡಾ. ಜಯಂತಿ ನಾಯ್ಕ್ ರಚಿಸಿದ ಕೊಂಕಣಿ ದೀರ್ಘ ಕತೆಗಳ ಸಂಕಲನ “ತಿಚಿ ಕಾಣಿ” (ಅವಳ ಕತೆ) ಆಯ್ಕೆಯಾಗಿದೆ.

Tichi Kanni - Jayanti Naik


ವರ್ಷದ ಅತ್ಯುತ್ತಮ ಕೊಂಕಣಿ ಕವಿತಾ ಕೃತಿಗೆ ನೀಡಲಾಗುವ ಶ್ರೀಮತಿ ವಿಮಲಾ ವಿ. ಪೈ ವಿಶ್ವ ಕೊಂಕಣಿ ಕವಿತಾ ಕೃತಿ ಪುರಸ್ಕಾರ 2022ಕ್ಕೆ ಮುಂಬಯಿಯ ಹೆಸರಾಂತ ಕೊಂಕಣಿ ಕವಿ, ಲೇಖಕ ವಲ್ಲಿ ಕ್ವಾಡ್ರಸ್ ರಚಿಸಿದ ಕೊಂಕಣಿ ಕವಿತಾ ಸಂಕಲನ “ಭಿತರಲೊ ಕವಿ” (ಆಂತರ್ಯದ ಕವಿ) ಆಯ್ಕೆಯಾಗಿದೆ.

ಕೊಂಕಣಿ ಭಾಷೆ, ಸಾಹಿತ್ಯ, ಸಂಸ್ಕೃತಿಯ ಬೆಳವಣಿಗೆಗೆ ವಿಶೇಷ ಕೊಡುಗೆ ನೀಡಿದ ಹಿರಿಯರನ್ನು ಗೌರವಿಸಲು ಸ್ಥಾಪಿಸಲಾದ ಶ್ರೀಮತಿ ವಿಮಲಾ ವಿ. ಪೈ ವಿಶ್ವ ಕೊಂಕಣಿ ಜೀವನ ಸಿದ್ಧಿ ಸಮ್ಮಾನ 2022ಕ್ಕೆ ಹಿರಿಯ ಕೊಂಕಣಿ ಮುಂದಾಳು, ಲೇಖಕ, ಅನುವಾದಕ ಮಾಣಿಕ್ ರಾವ್ ಗವಣೇಕರ್ ಇವರಿಗೆ ಕೊಂಕಣಿ ಭಾಷೆ, ಸಾಹಿತ್ಯಕ್ಕೆ ನೀಡಿದ ಅಪಾರ ಕೊಡುಗೆಯನ್ನು ಪರಿಗಣಿಸಿ ಆಯ್ಕೆ ಮಾಡಲಾಗಿದೆ.

ಒಂದು ಲಕ್ಷ ರೂಪಾಯಿಗಳ ಸಮ್ಮಾನಧನ ಮತ್ತು ಪ್ರಶಸ್ತಿ ಫಲಕಗಳನ್ನು ಹೊಂದಿರುವ ಈ ಪ್ರಶಸ್ತಿಗಳನ್ನು ದಾನಿ ಶ್ರೀ ಟಿ.ವಿ. ಮೋಹನದಾಸ ಪೈಯವರು ತಮ್ಮ ತಾಯಿ ಶ್ರೀಮತಿ ವಿಮಲಾ ವಿ. ಪೈಯವರ ಹೆಸರಿನಲ್ಲಿ ಪ್ರಾಯೋಜಿಸಿದ್ದಾರೆ.

ಫೆಬ್ರುವರಿ 9 ರಂದು ಬೆಳಿಗ್ಗೆ 10 ಗಂಟೆಗೆ ವಿಶ್ವ ಕೊಂಕಣಿ ಕೇಂದ್ರದಲ್ಲಿ ಜರಗಲಿರುವ ವಾರ್ಷಿಕ ವಿಶ್ವ ಕೊಂಕಣಿ ಪುರಸ್ಕಾರ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಪ್ರದಾನಿಸಲಾಗುವುದು.

ಈ ಪ್ರಶಸ್ತಿಗಳನ್ನು ಎರಡು ಸ್ತರದ ಪ್ರಕ್ರಿಯೆಯಲ್ಲಿ ಆಯ್ಕೆ ಮಾಡಲಾಗಿದ್ದು, ಪ್ರಾಥಮಿಕ ಸ್ತರದ ಆಯ್ಕೆ ಮಂಡಳಿಯ 16 ಸದಸ್ಯರ ನಾಮನಿರ್ದೇಶನದ ಆಧಾರದಲ್ಲಿ 5 ಸದಸ್ಯರ ಪರಿವೀಕ್ಷಕ ಮಂಡಳಿಯು ಪ್ರಶಸ್ತಿಗಾಗಿ ಆಯ್ಕೆಯನ್ನು ನಡೆಸುತ್ತದೆ. 2022 ನೇ ಸಾಲಿನ ಪರಿವೀಕ್ಷಕ ಮಂಡಳಿಯಲ್ಲಿ ಶ್ರೀ ಉದಯ ಭೆಂಬ್ರೆ, ಡಾ. ಕಿರಣ್ ಬುಡ್ಕುಳೆ, ಶ್ರೀ ಪಯ್ಯನೂರು ರಮೇಶ ಪೈ, ಶ್ರೀ ಮೆಲ್ವಿನ್ ರೋಡ್ರಿಗಸ್, ಶ್ರೀ ಗೋಕುಲದಾಸ ಪ್ರಭು ಸದಸ್ಯರಾಗಿದ್ದಾರೆ.
1996ನೇ ಇಸವಿಯಲ್ಲಿ ವಿಶ್ವ ಕೊಂಕಣಿ ಸರದಾರ ಶ್ರೀ ಬಸ್ತಿ ವಾಮನ ಶೆಣೈಯವರ ನೇತೃತ್ವದಲ್ಲಿ ಪ್ರಾರಂಭವಾದ ಕೊಂಕಣಿ ಭಾಸ್ ಆನಿ ಸಂಸ್ಕೃತಿ ಪ್ರತಿಷ್ಠಾನವು ವಿಶ್ವ ಕೊಂಕಣಿ ಕೇಂದ್ರವನ್ನು ಸ್ಥಾಪಿಸಿದ್ದು ಕೊಂಕಣಿ ಭಾಷೆ, ಸಾಹಿತ್ಯ, ಸಂಸ್ಕೃತಿಯ ಅಭಿವೃದ್ಧಿಗಾಗಿ ಹಾಗೂ ಕೊಂಕಣಿ ಸಮುದಾಯಗಳ ಸರ್ವಾಂಗೀಣ ಬೆಳವಣಿಗೆಗಾಗಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಶ್ರೀ ನಂದಗೋಪಾಲ ಶೆಣೈಯವರು ಈ ಪತ್ರಿಕಾ ಪ್ರಕಟಣೆಯನ್ನು ನೀಡಿರುತ್ತಾರೆ.

Related Posts

Leave a Reply

Your email address will not be published.