2022ನೇ ಸಾಲಿನ ಬಸ್ತಿ ವಾಮನ ಶೆಣೈ ವಿಶ್ವ ಕೊಂಕಣಿ ಸೇವಾ ಪುರಸ್ಕಾರ ಪ್ರಕಟ

ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರವು ಕೊಡಮಾಡುವ ಅಖಿಲ ಭಾರತ ಮಟ್ಟದ ಸಮಾಜ ಸೇವಾ ಪ್ರಶಸ್ತಿ ಬಸ್ತಿ ವಾಮನ ಶೆಣೈ ವಿಶ್ವ ಕೊಂಕಣಿ ಸೇವಾ ಪುರಸ್ಕಾರ 2022 ಪುರುಷ ಮತ್ತು ಮಹಿಳಾ ಈ ಎರಡು ವಿಭಾಗಗಳಲ್ಲಿ ಪ್ರಕಟವಾಗಿವೆ.
ಸಾರ್ವಜನಿಕ ಕ್ಷೇತ್ರದಲ್ಲಿ ವಿಶೇಷ ಸೇವೆಗೈಯುವ ಕೊಂಕಣಿ ಭಾಷಿಕರನ್ನು ಗುರುತಿಸಿ ಗೌರವಿಸುವ ಈ ಪುರಸ್ಕಾರವನ್ನು 2014ರಲ್ಲಿ ವಿಶ್ವ ಕೊಂಕಣಿ ಕೇಂದ್ರದ ಸಂಸ್ಥಾಪಕ ಬಸ್ತಿ ವಾಮನ ಶೆಣೈಯವರ 80ನೇ ಜನ್ಮದಿನದಂದು ದಾನಿ ಟಿ.ವಿ. ಮೋಹನದಾಸ ಪೈ ಪ್ರಾಯೋಜಕತ್ವದಲ್ಲಿ ಸ್ಥಾಪಿಸಲಾಗಿತ್ತು. ಇದು ವರೆಗೆ 16 ಪ್ರಶಸ್ತಿಗಳನ್ನು ಸೇವಾನಿರತರಿಗೆ ನೀಡಲಾಗಿದ್ದು 2022ನೇ ಸಾಲಿನ ಪ್ರಶಸ್ತಿಗೆ ಜ್ಯೂರಿ ಸಮಿತಿಯು ಸಮ್ಮಾನಿತರನ್ನು ಆಯ್ಕೆಮಾಡಿದೆ.


ಡಾ. ಲವಿನಾ ಎಂ. ನೊರೊನ್ಹಾ


ಮಾರಣಾಂತಿಕ ಕಾಯಿಲೆಗಳಿಂದ ನರಳುವ ರೋಗಿಗಳ ಅಂತಿಮ ದಿನಗಳನ್ನು ಸಹ್ಯವಾಗಿಸುವ ವಿಶೇಷ ಶುಶ್ರೂಷಾ ಕೇಂದ್ರ “ಆವೆ ಮಾರಿಯಾ ಪಾಲಿಯೇಟಿವ್ ಕೇರ್ ಸೆಂಟರ್” ಹಾಗೂ ಅಲ್ಜೈಮರ್ ರೋಗ ಪೀಡಿತರ ಶುಶ್ರೂಷೆಗಾಗಿ “ಸುಶೇಗ್ ನ್ಯೂರೋ ಸೆಂಟರ್” ನ್ನು ಸ್ಥಾಪಿಸಿರುವ ಡಾ. ಲವಿನಾ ಎಂ. ನೊರೊನ್ಹಾರವರನ್ನು 2022ನೇ ಸಾಲಿನ ಬಸ್ತಿ ವಾಮನ ಶೆಣೈ ವಿಶ್ವ ಕೊಂಕಣಿ ಸೇವಾ ಪುರಸ್ಕಾರಕ್ಕೆ (ಮಹಿಳಾ ವಿಭಾಗ) ಆಯ್ಕೆ ಮಾಡಲಾಗಿದೆ.


ಡಾ. ಬಿ. ಶಾಂತಾರಾಮ ಬಾಳಿಗಾ


ಮಂಗಳೂರಿನ ವೆನ್ ಲಾಕ್ ಮತ್ತು ಲೇಡಿ ಗೋಶೆನ್ ಆಸ್ಪತ್ರೆಗಳಲ್ಲಿ ನವಜಾತ ಶಿಶುಗಳ ತುರ್ತು ನಿಗಾ ಕೇಂದ್ರಗಳನ್ನು ಸ್ಥಾಪಿಸಲು ಕಾರಣಕರ್ತರಾಗಿರುವ ಮತ್ತು ಕರಾವಳಿ ಪ್ರದೇಶದ ಮಲೇರಿಯಾ ರೋಗ ನಿಯಂತ್ರಣ ನೀತಿಯನ್ನು ರೂಪಿಸುವಲ್ಲಿ ವಿಶೇಷ ಸೇವೆ ಸಲ್ಲಿಸಿರುವ ಪ್ರಸಿದ್ಧ ಶಿಶು ವೈದ್ಯ ಡಾ. ಬಿ. ಶಾಂತಾರಾಮ ಬಾಳಿಗಾರವರನ್ನು 2022 ನೇ ಸಾಲಿನ ಬಸ್ತಿ ವಾಮನ ಶೆಣೈ ವಿಶ್ವ ಕೊಂಕಣಿ ಸೇವಾ ಪುರಸ್ಕಾರಕ್ಕೆ (ಪುರುಷ ವಿಭಾಗ) ಆಯ್ಕೆ ಮಾಡಲಾಗಿದೆ.

ಈ ಪ್ರಶಸ್ತಿಗಳನ್ನು ಫೆಬ್ರುವರಿ 9 ರಂದು ವಿಶ್ವ ಕೊಂಕಣಿ ಕೇಂದ್ರದಲ್ಲಿ ಜರಗಲಿರುವ ವಿಶ್ವ ಕೊಂಕಣಿ ಪುರಸ್ಕಾರ ಸಮಾರಂಭದಲ್ಲಿ ಪ್ರದಾನಿಸಲಾಗುವುದು. ಪ್ರಶಸ್ತಿಗಳ ಪ್ರಾಯೋಜಕರಾಗಿರುವ ಟಿ.ವಿ. ಮೋಹನದಾಸ ಪೈಯವರ ಉಪಸ್ಥಿತಿಯಲ್ಲಿ ಡಾ. ಪಿ. ದಯಾನಂದ ಪೈ ಇವರ ಅಧ್ಯಕ್ಷತೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವು ಜರಗಲಿದೆ.ಮಾನವ ಅಧಿಕಾರ, ಬಳಕೆದಾರರ ಹಕ್ಕುಗಳ ರಕ್ಷಣೆ ಮತ್ತು ಅರಿವು ಕ್ಷೇತ್ರಗಳಲ್ಲಿ ಅನನ್ಯ ಸೇವೆಯನ್ನು ಗೈದ ಡಾ. ರವೀಂದ್ರನಾಥ ಶಾನಭಾಗರವರು ವಿಶ್ವ ಕೊಂಕಣಿ ಪುರಸ್ಕಾರ 2022 ಪ್ರದಾನಿಸಿ ಬಸ್ತಿ ವಾಮನ ಶೆಣೈ ಸ್ಮಾರಕ ಭಾಷಣವನ್ನು ಮಾಡಲಿರುವರು.

ಬಸ್ತಿ ವಾಮನ ಶೆಣೈ ವಿಶ್ವ ಕೊಂಕಣಿ ಸೇವಾ ಪುರಸ್ಕಾರಕ್ಕೆ ನಾಮನಿರ್ದೇಶನಗಳನ್ನು ಸಾರ್ವಜನಿಕರಿಂದ ಅಂತರ್ಜಾಲ ಮೂಲಕ ಆಹ್ವಾನಿಸಲಾಗಿತ್ತು. ಒಟ್ಟು 241 ನಾಮ ನಿರ್ದೇಶನಗಳು ಸಲ್ಲಿಕೆಯಾಗಿದ್ದವು. ಸಿ.ಡಿ.ಕಾಮತ್ ಅಧ್ಯಕ್ಷರಾಗಿದ್ದು ಗಿಲ್ಬರ್ಟ್ ಡಿಸೋಜಾ, ಶ್ಯಾಮಲಾ ಶೆಣೈ ಎ.ಕೆ., ಗಿರಿಧರ ಕಾಮತ್, ನಂದಗೋಪಾಲ ಶೆಣೈ ಸದಸ್ಯರಾಗಿರುವ ಜ್ಯೂರಿ ಸಮಿತಿಯು ಈ ನಾಮ ನಿರ್ದೇಶನಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡಲಾಗಿದೆ.

Related Posts

Leave a Reply

Your email address will not be published.