ಆತ್ಮಾವಲೋಕನ ಮಾಡಿಕೊಳ್ಳೋಣ :ಡಾ|| ಚೂಂತಾರು
ನಮಗೆ ಸ್ವಾತಂತ್ರ್ಯ ಲಭಿಸಿ 75 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಾಷ್ಟ್ರದಾದ್ಯಂತ ‘ಆಜಾದೀ ಕಾ ಅಮೃತ ಮಹೋತ್ಸವ’ ಎಂಬ ಪರಿಕಲ್ಪನೆಯೊಂದಿಗೆ ‘ಹರ್ ಘರ್ ತಿರಂಗಾ’ ಅಭಿಯಾನದಂತೆ ಪ್ರತಿ ಮನೆಗಳಲ್ಲಿ ಮತ್ತು ಮನಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದ್ದೇವೆ ಮತ್ತು ಅರಳಿಸಿದ್ದೇವೆ ಹಾಗೂ ನಮ್ಮೊಳಗೆ ಸುಪ್ತವಾಗಿರುವ ದೇಶ ಪ್ರೇಮವನ್ನು ಬಡಿದೆಬ್ಬಿಸಿದ್ದೇವೆ. ಈ ದಿನದಂದು ನಾವೆಲ್ಲಾ ನಮ್ಮ 75 ವರ್ಷಗಳ ಸಾಧನೆಯನ್ನು ಪುನರಾಮರ್ಶಿಸಿಕೊಂಡು, ಸಾಧನೆಯ ಮಜಲುಗಳ ಸಿಂಹಾವಲೋಕನ ಮಾಡಿಕೊಂಡು, ಮಗದೊಮ್ಮೆ ನಮ್ಮನ್ನು ದೇಶ ಸೇವೆಗಾಗಿ ಸಮರ್ಪಿಸಿಕೊಳ್ಳಬೇಕಾಗಿದೆ. ನಾವು ದೇಶಕ್ಕೆ ಏನು ಕೊಡುಗೆ ನೀಡಿದ್ದೇವೆ ಎಂಬ ವಿಚಾರದ ಬಗ್ಗೆ ಆತ್ಮಾವಲೋಕನೆ ಮಾಡಿಕೊಳ್ಳುವ ಸಂಧಿಕಾಲ ಇದಾಗಿದೆ. ಮುಂದೆ ಏನು ನಾವು ಸಾಧಿಸಬೇಕಾಗಿದೆ ಎನ್ನುವುದರ ಬಗ್ಗೆಯೂ ಯೋಜನೆಗಳನ್ನು ರೂಪಿಸಬೇಕಾಗಿದೆ ಎಂದು ದ. ಕ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಅಭಿಪ್ರಾಯಪಟ್ಟರು.’
ದಿನಾಂಕ 15-08-2022ನೇ ಸೋಮವಾರದಂದು ನಗರದ ಕಾಪಿಕಾಡಿನಲ್ಲಿರುವ ಬಾರೆಬೈಲ್ ಬಡಾವಣೆಯ ಜನರೆಲ್ಲಾ ಒಟ್ಟು ಸೇರಿ ಶ್ರೀ ಸುನೀಲ್ ಜೋನಸ್ ಅವರ ಮನೆಯ ಮುಂದೆ ಧ್ವಜಾರೋಹಣ ಮಾಡಿ ಸಂಭ್ರಮಿಸಿದರು. ಈ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದ ಆಚರಣೆಗೆ ಡಾ|| ಮುರಲೀ ಮೋಹನ್ ಚೂಂತಾರು ಅವರು ಧ್ವಜಾರೋಹಣ ಮಾಡಿ ಧ್ವಜವಂದನೆಗೈದು ಚಾಲನೆ ನೀಡಿದರು. ಬಡಾವಣೆಯ ಎಲ್ಲಾ ಮನೆಯವರು ಒಟ್ಟು ಸೇರಿ ಮೂರು ದಿನಗಳ ಕಾಲ ಹರ್ ಘರ್ ತಿರಂಗಾ ಅಭಿಯಾನದಲ್ಲಿ ಸಂತಸದಿಂದ ಪಾಲ್ಗೊಂಡರು. ಈ ಸಂದರ್ಭದಲ್ಲಿ ಶ್ರೀ ಎ.ಎಸ್. ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ನಾವೆಲ್ಲರೂ ಈ ರಾಷ್ಟ್ರೀಯ ಹಬ್ಬದಲ್ಲಿ ಸಂತೋಷದಿಂದ ನಾವೆಲ್ಲರೂ ಸಂಭ್ರಮಿಸೋಣ ಎಂದು ಕರೆ ನೀಡಿದರು. ಮುಖ್ಯ ಅಥಿತಿಗಳಾಗಿ ನಗರದ ಚೀಫ್ ಟ್ರಾಫಿಕ್ ವಾರ್ಡನ್ ಪ್ರೋ ಸುರೇಶ್ ನಾಥ್ ಭಾಗವಹಿಸಿ ಸ್ವಾತಂತ್ರ್ಯದ ಮಹತ್ವ ವಿವರಿಸಿ, ಸಹಬಾಳ್ವೆ,ಸಹೋದರತ್ವ ಮತ್ತು ಸಚ್ಚಾರಿತ್ರ್ಯ ದ ಬದುಕು ಬದುಕೋಣ ಎಂದು ಸಂದೇಶ ನೀಡಿದರು. ಬಡಾವಣೆಯ ಸುನೀಲ್, ಸಂಧ್ಯಾ, ಅರುಣ್ ಕೊಹ್ಲೋ, ರಾಜೇಂದ್ರ, ರವೀಂದ್ರ, ಶಶಿಧರ್, ಮಹೇಶ್, ಅಶ್ವಿನ್, ದೇವದಾಸ್ ಪೈ, ಡಾ|| ರಾಜಶ್ರೀ ಮೋಹನ್, ಶ್ರೀ ಅರುಣ್ ಭಟ್, ಪ್ರಶಾಂತ್ ಆಳ್ವ, ಅನಂತ ಶರ್ಮ, ಶ್ರೀ ಕೃಷ್ಣ ಭಟ್, ರವಿಶಂಕರ್, ರಾಘವೇಂದ್ರ, ನಂದಗೋಕುಲ ಅಪಾರ್ಟ್ಮೆಂಟಿನ ನಿವಾಸಿಗಳು, ಮುಂತಾದವರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.