ಮಗನ ಸಾವಿನಲ್ಲೂ ಸಾರ್ಥಕತೆ ಮೆರೆದ ಪೋಷಕರು- ಅಂಗಾಂಗ ದಾನ ಮೂಲಕ ಹಲವರಿಗೆ ಜೀವದ ಆಶಾಕಿರಣವಾದ ಯೋಗೇಶ್

ಹಾಸನ : ಬದುಕಿನ ಅತ್ಯಂತ ಕಠಿಣ ಕ್ಷಣದಲ್ಲೂ ಮಾನವೀಯತೆ ಮತ್ತು ಸಮಾಜಮುಖಿ ಚಿಂತನೆಯ ಉನ್ನತ ಮೌಲ್ಯಗಳನ್ನು ಪ್ರತಿಪಾದಿಸಿರುವ ಘಟನೆ ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೂಕಿನ ಸಾಗತವಳ್ಳಿ ಗ್ರಾಮದಲ್ಲಿ ನಡೆದಿದೆ. ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಬ್ರೈನ್ ಡೆಡ್ ಆದ ಮಗನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಪೋಷಕರು ಅನೇಕ ರೋಗಿಗಳಿಗೆ ಹೊಸ ಬದುಕಿನ ಆಶಾಕಿರಣ ನೀಡಿದ್ದಾರೆ.

ಸಾಗತವಳ್ಳಿ ಗ್ರಾಮದ ನಂಜಮ್ಮ ಹಾಗೂ ನಂಜುಂಡೇಗೌಡ ದಂಪತಿಯ ಪುತ್ರ ಯೋಗೇಶ್ (35) ಅವರು ಕಳೆದ ಆರು ದಿನಗಳ ಹಿಂದೆ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಅಪಘಾತದ ತಕ್ಷಣ ಅವರನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗೆ ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆ (ಹಿಮ್ಸ್)ಗೆ ದಾಖಲಿಸಲಾಯಿತು. ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಬಳಿಕ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸ್ಥಿತಿ ಮತ್ತಷ್ಟು ಚಿಂತಾಜನಕವಾದ ಹಿನ್ನೆಲೆಯಲ್ಲಿ ಪೋಷಕರು ಪುನಃ ಯೋಗೇಶ್ ಅವರನ್ನು ಹಿಮ್ಸ್‌ಗೆ ದಾಖಲಿಸಿದ್ದರು. ವೈದ್ಯರು ನಡೆಸಿದ ಸಮಗ್ರ ಪರೀಕ್ಷೆಗಳ ಬಳಿಕ ಯೋಗೇಶ್ ಅವರು ಬ್ರೈನ್ ಡೆಡ್ ಆಗಿರುವುದನ್ನು ದೃಢಪಡಿಸಿದರು. ಈ ಸುದ್ದಿ ಕುಟುಂಬಕ್ಕೆ ಆಘಾತ ತಂದರೂ, ಮಗನ ಜೀವ ಇನ್ನೊಬ್ಬರ ಬದುಕಿಗೆ ಕಾರಣವಾಗಲಿ ಎಂಬ ಉದ್ದೇಶದಿಂದ ಪೋಷಕರು ಮಹತ್ವದ ನಿರ್ಧಾರ ಕೈಗೊಂಡರು. ಯೋಗೇಶ್ ಅವರ ಲಿವರ್ ಹಾಗೂ ಹಾರ್ಟ್ ವಾಲ್ವ್ಸ್‌ ಸೇರಿದಂತೆ ಪ್ರಮುಖ ಅಂಗಾಂಗಗಳನ್ನು ದಾನ ಮಾಡುವುದಕ್ಕೆ ಅವರು ಲಿಖಿತ ಒಪ್ಪಿಗೆ ನೀಡಿದರು.

ಅಂಗಾಂಗ ದಾನ ಪ್ರಕ್ರಿಯೆ ವೈದ್ಯಕೀಯ ನಿಯಮಾನುಸಾರ ಪೂರ್ಣಗೊಳ್ಳುತ್ತಿದ್ದಂತೆ, ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿ ಅಂಬ್ಯುಲೆನ್ಸ್ ಮೂಲಕ ಅಂಗಾಂಗಗಳನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಯಿತು. ಸಮಯ ಅತ್ಯಂತ ಮುಖ್ಯವಾಗಿರುವ ಹಿನ್ನೆಲೆ ಪೊಲೀಸರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಸಮನ್ವಯದಿಂದ ಕಾರ್ಯನಿರ್ವಹಿಸಿ, ಯಾವುದೇ ವಿಳಂಬವಿಲ್ಲದೆ ಅಂಗಾಂಗಗಳನ್ನು ತಲುಪಿಸುವಲ್ಲಿ ಯಶಸ್ವಿಯಾದರು.

ಯೋಗೇಶ್ ಅವರ ಅಂಗಾಂಗ ದಾನದಿಂದ ಹಲವರಿಗೆ ಹೊಸ ಜೀವ ದೊರೆಯುವ ನಿರೀಕ್ಷೆ ಮೂಡಿದೆ. ಈ ಘಟನೆಯು ಅಂಗಾಂಗ ದಾನದ ಮಹತ್ವವನ್ನು ಮತ್ತೊಮ್ಮೆ ಸಮಾಜಕ್ಕೆ ತಿಳಿಸುವ ಜೊತೆಗೆ, ದುಃಖದ ನಡುವೆಯೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡ ಪೋಷಕರ ಧೈರ್ಯ ಮತ್ತು ಸಾಮಾಜಿಕ ಹೊಣೆಗಾರಿಕೆಗೆ ಮಾದರಿಯಾಗಿದೆ.


Related Posts

Leave a Reply

Your email address will not be published.