ಬೆಂಗಳೂರು:ಸಾಹಿತಿ ನಿವೃತ್ತ ಉಪನ್ಯಾಸಕ ಡಾ. ಕೆ. ಜಿ. ವಸಂತ ಮಾಧವ ನಿಧನ

ಖ್ಯಾತ ಸಂಶೋಧಕ ಸಾಹಿತಿ ನಿವೃತ್ತ ಉಪನ್ಯಾಸಕ ಡಾ. ಕೆ. ಜಿ. ವಸಂತ ಮಾಧವರು ಸೆಪ್ಟಂಬರ್ 17ರ ರಾತ್ರಿ ಬೆಂಗಳೂರಿನ ಮಗಳ ಮನೆಯಲ್ಲಿ
ನಿಧನರಾದರು.ಅವರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಪ್ರೊಫೆಸರ್ ಡಾ. ಕೆ.ಜಿ. ವಸಂತ ಮಾಧವ (ಗುಜ್ಜಾಡಿ ವಸಂತ ಮಾಧವ ಕೊಡಂಚ) ಅವರು 1937ರ ಏಪ್ರಿಲ್ 9ರಂದು ಜನಿಸಿದರು.
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿಯನ್ನು ಮತ್ತು ‘ಕೆನರಾದ ರಾಜಕೀಯ * ಇತಿಹಾಸ : ೧೫೬೫-೧೭೬೩’ ಎನ್ನುವ ವಿಷಯದ ಮೇಲೆ ಮಹಾಪ್ರಬಂಧವನ್ನು ರಚಿಸಿ ಪಿಎಚ್.ಡಿ. ಪದವಿಯನ್ನು ಪಡೆದವರು. ಮುಲ್ಕಿ ವಿಜಯಾ ಕಾಲೇಜಿನಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿ 32ವರ್ಷ ಕರ್ತವ್ಯ ನಿರ್ವಹಿಸಿದ ವಸಂತ ಮಾಧವರು. ನಿವೃತ್ತಿಯ ನಂತರ ಕೇರಳದ ಕ್ಯಾಲಿಕಟ್ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಪ್ರೊಫೆಸರ್‌ರಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸುಮಾರು ಇಪ್ಪತ್ತರಷ್ಟು ಇತಿಹಾಸ ಕೃತಿಗಳನ್ನು ಮತ್ತು ಸಾವಿರಾರು ಲೇಖನಗಳನ್ನು ಬರೆದಿದ್ದಾರೆ.
ವಸಂತ ಮಾಧವರ ಕುರಿತಾದ ಕೃತಿಯನ್ನು ಡಾ. ಎಸ್. ಪದ್ಮನಾಭ ಭಟ್ಟರು ರಚಿಸಿದ್ದು ನಾಡಿಗೆ ನಮಸ್ಕಾರ ಗ್ರಂಥಮಾಲೆಯಡಿ
ಕಾಂತಾವರ ಕನ್ನಡ ಸಂಘ ಪ್ರಕಟಿಸಿದೆ.
ಉಡುಪಿಯ ಗೋವಿಂದ ಪೈ ಸಂಶೋಧನಾ ಕೇಂದ್ರವರು ಅವರ ವಿದ್ವತ್ತನ್ನು ಪುರಸ್ಕರಿಸಿ ಗೌರವಿಸಿದ್ದಾರೆ. ಗೋವಾದಲ್ಲಿ ನಡೆದ ದಕ್ಷಿಣ ಭಾರತ ಇತಿಹಾಸ ಕಾಂಗ್ರೆಸ್ಸಿನ ಮೂರನೇ ವಿಶ್ವ ಸಮ್ಮೇಳನದಲ್ಲಿ ಅವರನ್ನು ಸನ್ಮಾನಿಸಲಾಗಿದೆ. ಅವರಿಗೆ ಯುಗಪುರುಷ ಪ್ರಶಸ್ತಿ ಮತ್ತು ಕೋ. ಮ. ಕಾರಂತ ಪ್ರಶಸ್ತಿ ಲಭಿಸಿದೆ. ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕ, ಮೂಲ್ಕಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕ, ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತುಗಳು ಸಾಹಿತ್ಯ ಸಮ್ಮೇಳನ ಸಂದರ್ಭಗಳಲ್ಲಿ ಅವರನ್ನು ಸನ್ಮಾನಿಸಿ ಗೌರವಿಸಿವೆ. ಅದೇ ರೀತಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಕೂಡಾ ಅವರನ್ನು ಸನ್ಮಾನಿಸಿದೆ. ಅಲ್ಲದೆ ಲಂಡನ್ನಿನ ರೋಯಲ್ ಏಷಿಯಾಸ್ಟಿಕ್ ಸೊಸೈಟಿ ೧೯೮೩ರಲ್ಲಿ ಹಾಗೂ ಕಲ್ಕತ್ತಾದ ಇತಿಹಾಸ ಅಧ್ಯಯನ ಸಂಸ್ಥೆ ೨೦೧೯ ರಲ್ಲಿ ‘ಫೆಲೋ’ ಗೌರವ ನೀಡಿದೆ.

Related Posts

Leave a Reply

Your email address will not be published.