ಶಿವಪಾಡಿಯ ಅತಿರುದ್ರ ಮಹಾಯಾಗಕ್ಕೆ ಸಚಿವ ವಿ. ಸುನೀಲ್ ಕುಮಾರ್ ಆಗಮನ

ಶಿವಪಾಡಿಯ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 22, 2023 ರಿಂದ ನಡೆಯುತ್ತಿರುವ ಅತಿರುದ್ರ ಮಹಾಯಾಗದ, ಆರನೇ ದಿನ ಫೆಬ್ರವರಿ 27, 2023 ರ ಸೋಮವಾರದಂದು, ಮುಂಜಾನೆ ಅತಿರುದ್ರ ಯಾಗಮಂಟಪದಲ್ಲಿ ಋತ್ವಿಜರಿಂದ ಮಹಾನ್ಯಾಸಪೂರ್ವಕ ಶ್ರೀ ರುದ್ರ ಪುರಶ್ಚರಣ ಮತ್ತು ದೇವಸ್ಥಾನದ ಪ್ರಾಂಗಣದಲ್ಲಿ ಋತ್ವಿಜರಿಂದ ಸಪ್ತಶತೀ ಪಾರಾಯಣ, ಮಹಾಮೃತ್ಯುಂಜಯ ಹೋಮ ನೆರವೇರಿತು.

ಇಂದು ಶಿವಪಾಡಿಯಲ್ಲಿ ನಡೆಯುತ್ತಿರುವ ಅತಿರುದ್ರ ಮಹಾಯಾಗಕ್ಕೆಕರ್ನಾಟಕ ಸರ್ಕಾರದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ವಿ. ಸುನೀಲ್ ಕುಮಾರ್ ಆಗಮಿಸಿದ್ದರು. ಯಾಗದಲ್ಲಿ ಪಾಲ್ಗೊಂಡು, ಶ್ರೀ ಉಮಾಮಹೇಶ್ವರ ದೇವರ ದರ್ಶನ ಪಡೆದರು. ನಂತರ ದೇವರ ಪ್ರಸಾದವನ್ನು ಸ್ವೀಕರಿಸಿದರು. ಇವರೊಂದಿಗೆ ಇತರೆ ಗಣ್ಯರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಅತಿರುದ್ರ ಮಹಾಯಾಗ ಸಮಿತಿಯ ಅಧ್ಯಕ್ಷರಾದ ಶಾಸಕ ಕೆ. ರಘುಪತಿ ಭಟ್ ಮತ್ತು ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರಾದ ಮಹೇಶ್ ಠಾಕೂರ್ ಉಪಸ್ಥಿತರಿದ್ದರು.

ಮಧ್ಯಾಹ್ನ ಸ್ಥಳೀಯ ವಿವಿಧ ಭಜನಾ ತಂಡಗಳಿಂದ ಭಜನೆಯೊಂದಿಗೆ, ಮಹಾ ಅನ್ನಸಂತರ್ಪಣೆ ನಡೆಯಿತು. ಆರನೇ ದಿನದ ಅತಿರುದ್ರ ಮಹಾಯಾಗದಲ್ಲಿ ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡರು.

Related Posts

Leave a Reply

Your email address will not be published.