ಮಾರ್ಚ್ 17 ರಂದು ಉಳ್ಳಾಲ ತಾಲೂಕು ಸಾಹಿತ್ಯ ಸಮ್ಮೇಳನ : ಶ್ಯಾಮಲಾ ಮಾಧವ ಸೋಮೇಶ್ವರ ಅಧ್ಯಕ್ಷರಾಗಿ ಆಯ್ಕೆ

ಮುಡಿಪು: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕವು ಮಂಗಳೂರು ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಮಾರ್ಚ್ 17 ರಂದು ಉಳ್ಳಾಲ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಂಗಳಗಂಗೋತ್ರಿಯ ಮಂಗಳ ಸಭಾಂಗಣದಲ್ಲಿ ನಡೆಸಲಾಗುವುದು ಎಂದು ಉಳ್ಳಾಲ ಘಟಕದ ಅಧ್ಯಕ್ಷರಾಗಿರುವ ಡಾ. ಧನಂಜಯ ಕುಂಬ್ಳೆ ತಿಳಿಸಿದ್ದಾರೆ.

ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ. ಪಿ. ಶ್ರೀನಾಥ್ ಮತ್ತು ತಜ್ಞರ ಸಮಿತಿಯು ಉಳ್ಳಾಲ ತಾಲೂಕಿನ ಸೋಮೇಶ್ವರ ಮೂಲದ ಪ್ರಸಿದ್ಧ ಸಾಹಿತಿ, ಅನುವಾದಕಿ ಶ್ರೀಮತಿ ಶ್ಯಾಮಲಾ ಮಾಧವ ಇವರನ್ನು ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಮಾಡಿದೆ. ಉಳ್ಳಾಲ ಸೋಮೇಶ್ವರದ ಉಚ್ಚಿಲ ಯು ನಾರಾಯಣ- ವಸಂತಿ ದಂಪತಿಯ ಪುತ್ರಿಯಾಗಿರುವ ಇವರು ಪ್ರಸ್ತುತ ಮುಂಬೈಯಲ್ಲಿ ವಾಸವಾಗಿದ್ದು ಹಿಂದಿ ಕಾದಂಬರಿ ‘ಆಲಂಪನಾ’, ಇಂಗ್ಲಿಷ್ ವಿಶ್ವ ಸಾಹಿತ್ಯ ಕೃತಿಗಳಾದ ‘ಗಾನ್ ವಿತ್ ದ ವಿಂಡ್’, ‘ಫ್ರಾಂಕಿನ್ ಸ್ಟೈನ್’, ‘ಜೇನ್ ಏರ್’, ‘ವದರಿಂಗ್ ಹೈಟ್ಸ್’, ರಾಮಯ್ಯ ರೈ ಅವರ ‘ಪೊಲೀಸ್ ಡೈರಿ’, ಎಂ ಆರ್ ಪೈ ಅವರ ‘ಆನ್ ಅನ್ ಕಾಮನ್ ಕಾಮನ್ ಮ್ಯಾನ್’ ಇವುಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ‘ಯಾತ್ರಿ’ ಎಂಬ ಕೃತಿಯನ್ನು ಇಂಗ್ಲಿಷಿಗೆ ಅನುವಾದಿಸಿದ್ದಾರೆ.

ವಿಲ್ ಡ್ಯುರಾಂಟ್ ಅವರ ‘ದ ಸ್ಟೋರಿ ಆಫ್ ಸಿವಿಲೈಸೇಶನ್’ ಗ್ರಂಥವನ್ನು , ಅಂಬೇಡ್ಕರ್ ಬರಹ ಮತ್ತು ಭಾಷಣಗಳ ಸಂಪುಟವನ್ನು ಮರಾಠಿಯಿಂದ ಕನ್ನಡಕ್ಕೆ ಅನುವಾದಿಸಿದ್ದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ಪ್ರಕಟವಾಗಿವೆ. ‘ಆ ಲೋಕ’ ಕಥಾಸಂಕಲನ, ‘ಬದುಕು ಚಿತ್ರ ಚಿತ್ತಾರ’ ಲೇಖನ ಸಂಪುಟ, ವಾಸ್ತವವಾದದ ಸಾಹಿತಿ ರಾಮಚಂದ್ರ ಉಚ್ಚಿಲ, ಅರುಂಧತಿ ರಾಯ್ ಅವರ ‘ದ ಗಾಡ್ ಆಫ್ ಸ್ಮಾಲ್ ಥಿಂಗ್ಸ್’ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ‘ನಾಳೆ ಇನ್ನೂ ಕಾದಿದೆ’ ಎಂಬ ಆತ್ಮ ಕಥನ ಪ್ರಕಟಗೊಂಡಿದೆ.

ಕರ್ನಾಟಕ ಲೇಖಕಿಯರ ಸಂಘದ ಎಚ್ ವಿ ಸಾವಿತ್ರಮ್ಮ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿ, ಎಸ್ ವಿ ಪರಮೇಶ್ವರ ಭಟ್ಟ ಪ್ರಶಸ್ತಿಗಳಲ್ಲದೆ ಕನ್ನಡ ಸಾಹಿತ್ಯ ಪರಿಷತ್ತಿನ ಮಹಾರಾಷ್ಟ್ರ ಘಟಕದ ಗೌರವ ಪ್ರಶಸ್ತಿ, ಕರ್ನಾಟಕ ಸರಕಾರದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಗೌರವ ಪ್ರಶಸ್ತಿ, ಮುಂಬೈ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಗೌರವ ಪ್ರಶಸ್ತಿ ಇವರಿಗೆ ಸಂದಿದೆ.

ಸಭೆಯಲ್ಲಿ ಕಸಾಪ ಉಳ್ಳಾಲ ತಾಲೂಕಿನ ಕಾರ್ಯದರ್ಶಿಗಳಾದ ರವೀಂದ್ರ ರೈ ಕಲ್ಲಿಮಾರು, ಎಡ್ವರ್ಡ್ ಲೋಬೊ, ಸ್ವಾಗತ ಸಮಿತಿಯ ಪ್ರಸಾದ್ ರೈ ಕಲ್ಲಿಮಾರು, ಕೋಶಾಧಿಕಾರಿ ಲಯನ್ ಚಂದ್ರಹಾಸ ಶೆಟ್ಟಿ ದೇರಳಕಟ್ಟೆ, ಉಳ್ಳಾಲ ಹೋಬಳಿ ಕಸಾಪ ಅಧ್ಯಕ್ಷೆ ವಿಜಯಲಕ್ಷ್ಮಿ ರೈ ಕಲ್ಲಿಮಾರು ಇವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.