ರಸ್ತೆ ಕಾಮಗಾರಿಗೆ ಸ್ಥಳೀಯರ ಆಗ್ರಹ
ಮುಲ್ಕಿ ತಾಲ್ಲೂಕು ವ್ಯಾಪ್ತಿಯ ಕೆಮ್ರಾಲ್ ಗ್ರಾಮ ಪಂಚಾಯತ್‌ನ ಪಕ್ಷಿಕೆರೆಯಿಂದ ಪಂಜ ಮೂಲಕ ಸುರತ್ಕಲ್ ಸಂಪರ್ಕ ಕಲ್ಪಿಸುವ ಜಿಲ್ಲಾ ಪಂಚಾಯತ್ ರಸ್ತೆ ತೀವ್ರ ಕೆಟ್ಟು ಹೋಗಿದ್ದು ಸಂಚಾರ ದುಸ್ತರವಾಗಿ ಪರಿಣಮಿಸಿದೆ.
ಈ ರಸ್ತೆಯ ಕೆಮ್ರಾಲ್ ಸಮುದಾಯ ಆರೋಗ್ಯ ಕೇಂದ್ರ ಹಾಗೂ ದಿ.ಶಾಂತರಾಮ ಶೆಟ್ಟಿ ಶಾಲೆಯ ಬಳಿ ತೀವ್ರ ಹದಗೆಟ್ಟಿದ್ದು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲಿ ಮಳೆ ನೀರು ಹರಿದು ರೋಡ್, ತೋಡಾಗಿ ಪರಿಣಮಿಸಿದ್ದು ಸ್ಥಳೀಯರು ಸಂಬಂಧಪಟ್ಟವರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.ಈ ಬಗ್ಗೆ ಪಕ್ಷಿಕೆರೆ ಆಟೋ ಚಾಲಕ ಮಾಲಕರ ಸಂಘದ ಸದಸ್ಯರಾದ ಜಗದೀಶ್ ಮಾತನಾಡಿ ಪಕ್ಷಿಕೆರೆ ಚರ್ಚು ಬಳಿಯಿಂದ ಪಂಜ ರಸ್ತೆಯಲ್ಲಿ ಸಂಚರಿಸುವುದೇ ಒಂದು ಸವಾಲಾಗಿದ್ದು ರಸ್ತೆ ಬದಿಯಲ್ಲಿ ಚರಂಡಿ ಇಲ್ಲದೆ ಮಳೆ ನೀರು ರಸ್ತೆಯಲ್ಲಿ ಹರಿಯುತ್ತಿದ್ದು ತೀರಾ ಅಪಾಯಕಾರಿಯಾಗಿ ಪರಿಣಮಿಸಿದೆ.
ಈ ಭಾಗದಲ್ಲಿ ಶಾಲೆ ಹಾಗೂ ಆಸ್ಪತ್ರೆಗೆ ಬರುವ ಮಕ್ಕಳು ಹಾಗೂ ರೋಗಿಗಳು ವಾಹನಗಳಲ್ಲಿ ಸಂಚರಿಸುವುದು ಪ್ರಾಸದಾಯಕವಾಗಿದೆ. ಎದುರಿನಲ್ಲಿ ಘನವಾಹನ ಬಂದರೆ ದ್ವಿಚಕ್ರ ವಾಹನ ಹಾಗೂ ಆಟೋಗಳು ರಸ್ತೆ ಬದಿಯ ಅಂಚಿನಲ್ಲಿ ಕೆಳಗಿಳಿದರೆ ವಾಹನ ಪಲ್ಟಿ ಯಾಗುವ ಸಾಧ್ಯತೆ ಹೆಚ್ಚಿದ್ದು ಅಪಾಯಕಾರಿಯಾಗಿದೆ.ಕೂಡಲೇ ಶಾಸಕರು ಹಾಗೂ ಸಂಬಂಧಪಟ್ಟ ಪಂಚಾಯತ್ ಅಧಿಕಾರಿಗಳು ಗಮನ ಹರಿಸಿ ತಾತ್ಕಾಲಿಕ ನೆಲೆಯಲ್ಲಿ ರಸ್ತೆಗೆ ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ.
ಈ ಸಂದರ್ಭ ಪಕ್ಷಿಕೆರೆ ಆಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಮೊಗಪಾಡಿ, ಸದಸ್ಯರಾದ ಮಾಧವ ಶೆಟ್ಟಿಗಾರ್, ಅಚ್ಯುತ ಆಚಾರ್ಯ, ರಾಘವೇಂದ್ರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು