ಬೆದ್ರ ಶ್ರೀಕೃಷ್ಣ ವೇಷಧಾರಿ ಯಕ್ಷಗಾನ ಹಿಮ್ಮೇಳ ಕಲಾವಿದ ಸುಧಾಕರ ಕುಲಾಲ್ (ದಾಸಪ್ಪ) ನಿಧನ
ಮೂಡುಬಿದಿರೆ: ಬೆದ್ರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಮೊಸರುಕುಡಿಕೆ ಉತ್ಸವದಲ್ಲಿ ಶ್ರೀಕೃಷ್ಣ ವೇಷಧಾರಿಯ ಯಕ್ಷಗಾನ ಹಿಮ್ಮೇಳ ತಂಡದ ನೇತೃತ್ವ ವಹಿಸುತ್ತಿದ್ದ ಹಿರಿಯ ಭಾಗವತಿಕೆ ಹಾಗೂ ಮದ್ದಳೆ ಕಲಾವಿದ ಸುಧಾಕರ ಕುಲಾಲ್ (ದಾಸಪ್ಪ) 78ಮಳಲಿಯಲ್ಲಿ ಅನಾರೋಗ್ಯದಿಂದ ನಿಧನರಾದರು.
ಮೂಡುಬಿದಿರೆಯ ಯಕ್ಷಗಾನೀಯ ಪರಂಪರೆಯ ಮೊಸರುಕುಡಿಕೆ ಉತ್ಸವದ ಪ್ರಮುಖ ಹಿನ್ನೆಲೆದಾರರಾಗಿದ್ದ ಸುಧಾಕರ ಕುಲಾಲ್ ಮಂಗಳವಾರ ಮುಂಜಾನೆ ಅಲ್ಪಕಾಲದ ಅಸ್ವಸ್ಥತೆಯಿಂದ ಕೊನೆಯುಸಿರೆಳೆದರು. ಅವರು ಪತ್ನಿ, ಇಬ್ಬರು ಪುತ್ರರು ಹಾಗೂ
ಪುತ್ರಿಯನ್ನು ಅಗಲಿದ್ದಾರೆ.
ಬಾಲ್ಯದಿಂದಲೇ ಟೈಲರಿಂಗ್ ವೃತ್ತಿಯನ್ನು ಅಳವಡಿಸಿಕೊಂಡಿದ್ದ ಅವರು, ಆರು ದಶಕಗಳಿಗೂ ಹೆಚ್ಚು ಕಾಲ ಮಳಲಿ ಪರಿಸರದಲ್ಲಿ ಯಶಸ್ವಿ ಟೈಲರ್ ಆಗಿ ಗುರುತಿಸಿಕೊಂಡಿದ್ದರು. ವೃತ್ತಿಯ ಜತೆಗೆ ಕಲಾಸೇವೆಯಲ್ಲೂ ತೊಡಗಿಸಿಕೊಂಡಿದ್ದ ಸುಧಾಕರ ಕುಲಾಲ್, ಮಳಲಿಯ ಶ್ರೀ ರಾಮಾಂಜನೇಯ ಯಕ್ಷಗಾನ ಮಂಡಳಿಯಲ್ಲಿ ಭಾಗವತರಾಗಿ ಹಾಗೂ ಹಿಂದೆ ಪಾತ್ರಧಾರಿಯಾಗಿಯೂ ಸೇವೆ ಸಲ್ಲಿಸಿದ್ದರು.
ಇದಲ್ಲದೆ, ರಾಮಾಂಜನೇಯ ಭಜನಾ ಮಂಡಳಿಯಲ್ಲಿ ಸಕ್ರಿಯರಾಗಿದ್ದ ಅವರು, ಇತ್ತೀಚೆಗೆ ನಡೆದ ಮಂಡಳಿಯ 75ನೇ ವರ್ಷಾಚರಣೆಯಲ್ಲಿ ಗೌರವಾಧ್ಯಕ್ಷರಾಗಿ ಗೌರವಿಸಲ್ಪಟ್ಟಿದ್ದರು. ಅವರ ನಿಧನದಿಂದ ಮಳಲಿ ಹಾಗೂ ಮೂಡುಬಿದಿರೆ ಭಾಗದ ಯಕ್ಷಗಾನ ಮತ್ತು ಭಜನಾ ವಲಯದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.


















