ಮಣೇಲ್ ಗ್ರಾಮದಲ್ಲಿ ಅಬ್ಬಕ್ಕ ರಾಣಿ ಗ್ರಾಮೋತ್ಸವ ನಡೆಯಲಿ : ಡಾ.ಚಿನ್ನಪ್ಪ ಗೌಡ
ಮಂಗಳೂರು: ರಾಣಿ ಅಬ್ಬಕ್ಕನ ಅರಮನೆ ಇದ್ದಂತಹ ಹಾಗೂ ವಿದೇಶಿ ಪ್ರವಾಸಿ ಅಬ್ಬಕ್ಕನನ್ನು ಭೇಟಿ ಮಾಡಿದ ಗಂಜೀಮಠ ಗ್ರಾಂ.ಪಂ ವ್ಯಾಪ್ತಿಯ
ಮಣೇಲಿನಲ್ಲಿ ಅಬ್ಬಕ್ಕ ರಾಣಿಯ ಉತ್ಸವ ಗ್ರಾಮೋತ್ಸವದ ರೂಪದಲ್ಲಿ ಆರಂಭಗೊಳ್ಳಬೇಕು, ಸಹಬಾಳ್ವೆ, ಕೋಮು ಸಾಮರಸ್ಯ, ಬಹುತ್ವದ ಜೀವನ ಮೌಲ್ಯಗಳನ್ನು ಕಟ್ಟಿಕೊಡುವ ಜತೆಗೆ ಅಬ್ಬಕ್ಕ ರಾಣಿಯ ಐತಿಹ್ಯದ ದಿನಗಳನ್ನು ಸ್ಮರಿಸಿಕೊಳ್ಳುವಂತಹ ‘ಅಬ್ಬಕ್ಕ’ ಸಾಂಸ್ಕೃತಿಕ ಗ್ರಾಮವನ್ನು ಕಟ್ಟುವ ಕಾರ್ಯ ನಡೆಯಬೇಕು ಎಂದು ಜಾನಪದ ವಿದ್ವಾಂಸ, ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ. ಕೆ. ಚಿನ್ನಪ್ಪ ಗೌಡ ಹೇಳಿದರು.

ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಳಲಿಯ ದ.ಕ.ಜಿ.ಪಂ. ಮಾದರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮತ್ತು ಮಣೇಲ್ ರಾಣಿ ಅಬ್ಬಕ್ಕ ಚಾವಡಿ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಮಳಲಿ ಸರ್ಕಾರಿ ಶಾಲೆಯಲ್ಲಿ ಆಯೋಜಿಸಿದ ‘ಮಣೇಲ್‌ದ ಪೆರ್ಮೆ ರಾಣಿ ಅಬ್ಬಕ್ಕ’ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.

ರಾಣಿ ಅಬ್ಬಕ್ಕ ಕುರಿತು ಚಾರಿತ್ರ್ಯಿಕ ಸಾಧನೆಗಳ ಬಗ್ಗೆ ಇನ್ನೂ ದೊಡ್ಡ ಮಟ್ಟದಲ್ಲಿ ಅಧ್ಯಯನ ನಡೆದಿಲ್ಲ. ಕಳೆದ 30 ವರ್ಷಗಳಿಂದ ಆಕೆಯ ಬಗ್ಗೆ ಅಧ್ಯಯನಗಳು, ಉಳ್ಳಾಲದಲ್ಲಿ ಸ್ಮರಣೀಯ ಕಾರ್ಯಕ್ರಮ ಆರಂಭಗೊಂಡಿದೆ. ಮಣೇಲ್(ಮಳಲಿ) ಅಬ್ಬಕ್ಕ ನಡೆದಾಡಿದ ಸ್ಥಳವಾಗಿದ್ದು, ಪ್ರಾಕೃತಿಕ, ಭೌತಿಕ, ಸಾಂಸ್ಕೃತಿಕ, ಐತಿಹಾಸಿಕ, ಸಂಪನ್ಮೂಲಗಳು ಇವೆ. ಮುಂದಿನ ಪೀಳಿಗೆಗೆ ಆಕೆಯ ಸಮಗ್ರ ಚರಿತ್ರೆ ಪರಿಚಯಿಸುವ ಕೆಲಸ ಇಲ್ಲಿಂದಲೇ ಆರಂಭ ಆಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡ್ ಮಾತನಾಡಿ, 135 ವರ್ಷಗಳ ಇತಿಹಾಸವಿರುವ ಮಳಲಿ ಶಾಲೆಯಲ್ಲಿ ಅಬ್ಬಕ್ಕಳ ಬಗ್ಗೆ ನಡೆದ ಗೋಷ್ಠಿ ಸ್ಮರಣೀಯವಾಗಿದ್ದು, ಉಳ್ಳಾಲದ ರಾಣಿ ಅಬ್ಬಕ್ಕನಿಗೆ ಸಂಬಂಧಿಸಿದ ಅರಮನೆಯ ಪಡಿಯಚ್ಚು ಮಳಲಿಯಲ್ಲಿದೆ ಎಂಬುದು ಬಹುಜನರಿಗೆ ಗೊತ್ತಿಲ್ಲ. ಇಲ್ಲಿ ನ ಶಾಲೆಯ ಭಿತ್ತಿಯಲ್ಲಿ ಅಬ್ಬಕ್ಕಳ ಚಿತ್ರ ಮೂಡಿಸುವ ಕಾರ್ಯ ಅಕಾಡೆಮಿ ವತಿಯಿಂದ ನಡೆಯಲಿದೆ. ಅಬ್ಬಕ್ಕನ ಮಣೇಲ್ ಗ್ರಾಮದ ಚರಿತ್ರೆಯನ್ನು ಜನತೆಗೆ ಮುಟ್ಟಿಸುವ ಕಾರ್ಯವೂ ಆಗಬೇಕಿದೆ ಎಂದರು.

ಬಂಟ್ವಾಳದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕಾರಾಮ ಪೂಜಾರಿ ಅವರು ‘ಅಬ್ಬಕ್ಕ : ಚಾರಿತ್ರಿಕ ಅವಲೋಕನ’ ವಿಷಯದಲ್ಲಿ ಉಪನ್ಯಾಸ ನೀಡಿ, ಅಬ್ಬಕ್ಕನ ಬಗ್ಗೆ ಲಭಿಸುವ ಎಲ್ಲಾ ಚಾರಿತ್ರಿಕ ಕುರುಹುಗಳನ್ನು ಸಂಗ್ರಹಿಸಬೇಕು ಎಂದರು.
ಇತಿಹಾಸ ತಜ್ಞ-ನಿವೃತ್ತ ಉಪನ್ಯಾಸಕ ಡಾ. ಪುಂಡಿಕಾಯಿ ಗಣಪಯ್ಯ ಭಟ್ ಅವರು `ಮಣೇಲ್ ಗ್ರಾಮದಲ್ಲಿ ಅಬ್ಬಕ್ಕನನ್ನು ಭೇಟಿ ಮಾಡಿದ ಪ್ರವಾಸಿ’ ವಿಷಯ ಕುರಿತು ಮಾತನಾಡಿದರು. 400 ವರ್ಷಗಳ ಹಿಂದೆ 1623 ರ ಡಿಸೆಂಬರ್ ತಿಂಗಳ ಐದು ಮತ್ತು ಆರು ಹಾಗೂ 7ನೇ ತಾರೀಕಿನಂದು ಇಟಲಿ ಪ್ರವಾಸಿ ಪಿಯಾತ್ರೋ ದಲ್ಲವೆಲ್ಲೆ ಮಣೇಲ್ ಗ್ರಾಮಕ್ಕೆ ಭೇಟಿ ನೀಡಿ ಅಬ್ಬಕ್ಕನನ್ನು ಮಾತನಾಡಿಸಿದ್ದ ಹಾಗೂ ಮಣೇಲ್ ಗ್ರಾಮದ ಪ್ರಾಕೃತಿಕ ಹಿನ್ನೆಲೆಯನ್ನು ಉಲ್ಲೇಖಿಸಿದ್ದ ಎಂದರು.

ಸಮಾರಂಭದಲ್ಲಿ ಗಂಜಿಮಠ ಗ್ರಾ.ಪಂ.ಉಪಾಧ್ಯಕ್ಷರಾದ ಸಾರಮ್ಮ, ಕಟ್ಟೆಮಾರ್ ಮನೆತನದ ಪ್ರಶಾಂತ್ ಕುಮಾರ್ ಕಟ್ಟೆಮಾರ್,
ಪಂಚಾಯತ್ ಮಾಜಿ ಅಧ್ಯಕ್ಷ ನೋಣಯ್ಯ ಕೋಟ್ಯಾನ್, ಶಾಲಾ ಮುಖ್ಯ ಶಿಕ್ಷಕ ಡಾ.ಮಹೇಶ್, ಚಿತ್ರ ಕಲಾವಿದ ಗಣೇಶ್ ಸೋಮಯಾಜಿ, ಗುಣಪಾಲ ಮೇಂಡ, ಎಸ್‌ಡಿಎಂಸಿ ಅಧ್ಯಕ್ಷ ಸೀತಾರಾಮ ಪೂಜಾರಿ, ಉಳಿಪಾಡಿಗುತ್ತು ಉದಯ ಕುಮಾರ್ ಆಳ್ವ, ತುಳು ಪರಿಷತ್ ಅಧ್ಯಕ್ಷ ಶುಭೋದಯ ಆಳ್ವ, ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾದ ಅಕ್ಷಯ ಆರ್. ಶೆಟ್ಟಿ, ಬಾಬು ಕೊರಗ ಪಾಂಗಾಳ ಮತ್ತಿತರರು ಉಪಸ್ಥಿತರಿದ್ದರು.
ಶಾಲಾ ಶಿಕ್ಷಕ-ಶಿಕ್ಷಕಿಯರು, ಸಂಘ-ಸoಸ್ಥೆಗಳ ಪ್ರಮುಖರು, ಊರಿನ ಗಣ್ಯರು, ವಿದ್ಯಾರ್ಥಿಗಳು, ರಾಣಿ ಅಬ್ಬಕ್ಕ ಮಹಿಳಾ ಸಂಘದ ಸದಸ್ಯರು, ಗ್ರಾಮದ ಪ್ರಮುಖ ಪಾಲ್ಗೊಳ್ಳುವಿಕೆಯಲ್ಲಿ ಕಟ್ಟೆ ಮಾರ್ ಅರಮನೆಯಿಂದ ಮಳಲಿ ಶಾಲೆಯವರೆಗೆ ಸಾಂಸ್ಕೃತಿಕ ನಡಿಗೆ ನಡೆಯಿತು.
ನಿವೃತ್ತ ಪ್ರಾಂಶುಪಾಲ ಪ್ರೊ. ಅಕ್ಷಯ್ ಕುಮಾರ್ ಜೈನ್ ನಿರೂಪಿಸಿದರು. ಶಿಕ್ಷಕ ಮಹೇಶ್ ಶೆಟ್ಟಿ ಅವರು ಸ್ವಾಗತಿಸಿದರು. ಅಕಾಡೆಮಿ ಸದಸ್ಯ ಸಂಚಾಲಕ ಬೂಬ ಪೂಜಾರಿ ವಂದಿಸಿದರು.


















