ಬ್ಲೇಡ್ ಕಂಪೆನಿಗಳ ಮೋಸದ ಜಾಲಕ್ಕೆ ಬಲಿಬೀಳಬೇಡಿ- ಸಂತೋಷ್ ಬಜಾಲ್
ಮಂಗಳೂರಿಗೆ ಒಂದೊಂದು ಹೆಸರಲ್ಲಿ ಆಗಮಿಸುತ್ತಿರುವ ಬ್ಲೇಡ್ ಕಂಪೆನಿಗಳು ಜನಸಾಮಾನ್ಯರ ದುಡಿಮೆಯ ಹಣವನ್ನು ಉಳಿತಾಯ ಹೆಸರಿನ ಯೋಜನೆಯಲ್ಲಿ ಕೊಳ್ಳೆಹೊಡೆದು ಕೋಟ್ಯಾಂತರ ಹಣವನ್ನು ಮೋಸ ಮಾಡಿ ಬಾಗಿಲು ಮುಚ್ಚಿದ ಪ್ರಕರಣಗಳ ಬಗ್ಗೆ ಸಾಲು ಸಾಲು ಉದಾಹರಣೆಗಳಿವೆ.ಜನರ ಆರ್ಥಿಕ ಸಂಕಷ್ಟಗಳ ಪರಿಹಾರಕ್ಕೆಂದು ಮಂಗಳೂರಿಗೆ ಬರುವ ಇಂತಹ ಬ್ಲೇಡ್ ಕಂಪೆನಿಗಳ ಮೋಸದ ಜಾಲಕ್ಕೆ ಜನತೆ ಬಲಿಬೀಳಬಾರದು ಎಂದು ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಪಿಎಸಿಎಲ್ ಅನ್ಯಾಯದ ವಿರುದ್ಧದ ಹೋರಾಟದ ರೂಪುರೇಷೆಗಾಗಿ ನಡೆದ ಪಿಎಸಿಎಲ್ ಎಜೆಂಟರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಮುಂದುವರಿಸುತ್ತಾ ಅವರು, ಪಿಎಸಿಲ್ ಕಂಪೆನಿ ಒಟ್ಟು 49 ಸಾವಿರ ಕೋಟಿ ರೂಪಾಯಿಗಳಷ್ಟು ವಂಚಿಸಿದೆ.ಈ ಹಿಂದೆಯೂ ನಗರದಲ್ಲಿ ಆದೀಶ್ವರ್ ಮಾರ್ಕೆಟಿಂಗ್ ನಿಂದ ಹಿಡಿದು ಬಿಝಾರೆ,ಅಗ್ರಿಗೋಲ್ಡ್, ಸೆವೆನ್ ಹಿಲ್ಸ್,ವೃಕ್ಷ, ಆರ್.ಎಮ್.ಪಿ, ಸಮೃದ್ಧ ಜೀವನ್ ನಂತಹ ಹಲವಾರು ಬ್ಲೇಡ್ ಕಂಪೆನಿಗಳು ಜನರ ಮುಂದಿನ ಕನಸಿನ ಯೋಜನೆಗಾಗಿ ಮೀಸಲಿರಿಸಿದ ಹಣವನ್ನು ದೋಚಿ ಪರಾರಿಯಾಗಿದೆ. ಇಂತಹ ಕಂಪೆನಿಗಳು ಈ ರೀತಿ ರಾಜಾರೋಷವಾಗಿ ದೋಚಲು ಸರಕಾರಗಳೇ ಪರೋಕ್ಷ ಕಾರಣ. ಯಾವುದೇ ಪಾರದರ್ಶಕ ಇಲ್ಲದೆ ಬ್ಲೇಡ್ ಕಂಪೆನಿಗಳಿಗೆ ಜನರಿಂದ ಹಣ ಸಂಗ್ರಹಿಸಲು ಅವಕಾಶ ಮಾಡಿಕೊಟ್ಟಿದ್ದೆ ಇದಕ್ಕೆಲ್ಲಾ ಕಾರಣ. ಇನ್ನು ಯಾವತ್ತು ಇಂತಹ ಬ್ಲೇಡ್ ಕಂಪೆನಿಗಳು ನಗರಕ್ಕೆ ಕಾಲಿಡದಂತೆ ಹಾಗೂ ಯಾವೊಬ್ಬ ಬಡಪಾಯಿಯೂ ಈರೀತಿ ಮೋಸದ ಜಾಲಕ್ಕೆ ಬಲಿಬೀಳದಂತೆ ನೋಡಿಕೊಳ್ಳಲು ಮತ್ತು ನಮ್ಮ ಅನ್ಯಾಯಕ್ಕೆ ನ್ಯಾಯ ಸಿಗಲು ನ್ಯಾಯಯುತ ಹೋರಾಟ ನಡೆಸಬೇಕಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜಿಲ್ಲಾ ಯುವ ನಾಯಕರಾದ ಬಿ ಕೆ ಇಮ್ತಿಯಾಜ್ ರವರು ಮಾತನಾಡುತ್ತಾ, ಕಳೆದ 9 ವರ್ಷಗಳಿಂದ PACL ನಿಂದಾದ ಅನ್ಯಾಯದ ವಿರುದ್ಧ ಏಜೆಂಟರು ಹಾಗೂ ಜನಸಾಮಾನ್ಯರು ತಮ್ಮ ಬೆವರು ಸುರಿಸಿ ದುಡಿದ ಕೋಟ್ಯಾಂತರ ಹಣ ಕಣ್ಣೆದುರು ಲೂಟಿಯಾದರೂ ಯಾವನೇ ಒಬ್ಬ ಜನಪ್ರತಿನಿಧಿ ಜನರ ಸಂಕಷ್ಟದ ಬಗ್ಗೆ ಇಷ್ಟರವರೆಗೆ ಮಾತನಾಡಿಲ್ಲ. ಈ ರೀತಿಯ ಜನರ ಸಂಕಷ್ಟಕ್ಕೆ ಸರ್ಕಾರವೇ ನೇರ ಹೊಣೆ ಎಂದು ಆಪಾದಿಸಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಜಿಲ್ಲಾ ಕಾರ್ಮಿಕ ಮುಖಂಡರಾದ ಸುನಿಲ್ ಕುಮಾರ್ ಬಜಾಲ್ ರವರು ಒಂದು ಕಡೆ ಜನತೆ ಸರಕಾರದ ತಪ್ಪು ಆರ್ಥಿಕ ನೀತಿಗಳಿಂದ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದರೆ,ಮತ್ತೊಂದು ಕಡೆ ಉಳಿಸಿದ ಅಲ್ಪ ಸ್ವಲ್ಪ ಹಣವನ್ನು ಈ ನಮೂನೆಯ ಬ್ಲೇಡ್ ಕಂಪನಿಗಳು ನುಂಗಿ ನೀರು ಕುಡಿಯುತ್ತದೆ.ಆಳುವ ಸರಕಾರಗಳೇ ಜನತೆಯನ್ನು ದೋಚಲು ಗ್ರೀನ್ ಸಿಗ್ನಲ್ ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಜಿಲ್ಲಾ ಕಾರ್ಮಿಕ ನಾಯಕರಾದ ಯೋಗೀಶ್ ಜಪ್ಪಿನಮೋಗರು,ಮಾಜಿ ಕಾರ್ಪೊರೇಟರ್ ದಯಾನಂದ ಶೆಟ್ಟಿ,PACL ಏಜೆಂಟರ ಮುಖಂಡರಾದ ತೆಲ್ಮ ಮೊಂತೆರೋ,ಆಸುಂತ ಡಿಸೋಜ,ಶ್ಯಾಮಲ,ನ್ಯಾನ್ಸಿ ಫೆರ್ನಾಂಡಿಸ್,ರೊಸಲಿನ್ ಪಿಂಟೋ,ಜನಪರ ಚಿಂತಕರಾದ ದಾಮೋದರ ಉಳ್ಳಾಲರವರು ಉಪಸ್ಥಿತರಿದ್ದರು.
ಮುಂಬರುವ ದಿನಗಳಲ್ಲಿ PACL ನಿಂದಾದ ಅನ್ಯಾಯದ ವಿರುದ್ಧ ಪ್ರಬಲ ಹೋರಾಟವನ್ನು ರೂಪಿಸಲು PACL ಏಜೆಂಟರ ಹೋರಾಟ ಸಮಿತಿಯನ್ನು ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಸುನಿಲ್ ಕುಮಾರ್ ಬಜಾಲ್,ಗೌರವ ಸಲಹೆಗಾರರಾಗಿ ಬಿ ಕೆ ಇಮ್ತಿಯಾಜ್,ಯೋಗೀಶ್ ಜಪ್ಪಿನ ಮೊಗರು,ಸಂತೋಷ್ ಬಜಾಲ್,ದಾಮೋದರ ಉಳ್ಳಾಲ,ದಯಾನಂದ ಶೆಟ್ಟಿ,ಅಧ್ಯಕ್ಷರಾಗಿ ತೆಲ್ಮಾ ಮೊಂತೇರೋ,ಪ್ರಧಾನ ಕಾರ್ಯದರ್ಶಿಯಾಗಿ ಆಸುಂತಾ ಡಿಸೋಜ,ಖಜಾಂಚಿಯಾಗಿ ನಾನ್ಸಿ ಫೆರ್ನಾಂಡಿಸ್, ಉಪಾಧ್ಯಕ್ಷರಾಗಿ ರೋಸಲಿನ್ ಪಿಂಟೋ,ಶ್ಯಾಮಲ, ಅರುಣಾ ಕೋಟ್ಯಾನ್,ಜನಾರ್ದನ ಪುತ್ತೂರು,ಜೇಮ್ಸ್ ಪ್ರವೀಣ್, ಕಾರ್ಯದರ್ಶಿಗಳಾಗಿ ದೇವಿಕಾ ಮಂಗಳಾದೇವಿ, ವಾಯಿಲೆಟ್ ಚೇಳೂರು,ಸುನೀತಾ ಬಜಾಲ್, ಶಾಲಿನಿ,ಪದ್ಮನಾಭ ತೋಕೂರುರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.ಹಾಗೂ 17 ಮಂದಿಯ ಕಾರ್ಯಕಾರಿ ಸಮಿತಿಯನ್ನು ಆರಿಸಲಾಯಿತು .