ಜುಡಿತ್ ಓಲ್ಗ ಮಾರ್ಗರೇಟ್ ಕ್ರಾಸ್ತಾ ಇವರಿಗೆ ಪೊಲೀಸ್ ಇಲಾಖೆಯ ವತಿಯಿಂದ ಸನ್ಮಾನ
ಮಂಗಳೂರು ನಗರಕ್ಕೆ ನಿಷೇಧಿತ ಮಾದಕದ್ರವ್ಯವಾದ ಎಂ.ಡಿ.ಎಂ.ಎ ಪೂರೈಕೆ ಮಾಡುತ್ತಿದ್ದ ಆರೋಪಿಗಳನ್ನು ಮಂಗಳೂರು ಸಿಸಿಬಿ ಘಟಕದ ಅಧಿಕಾರಿ, ಸಿಬ್ಬಂದಿಗಳು ಪತ್ತೆ ಮಾಡಿ ಮಾದಕವಸ್ತುಗಳನ್ನು ಸ್ವಾಧೀನಪಡಿಸಿಕೊಂಡು ಆರೋಪಿಗಳನ್ನು ದಸ್ತಗಿರಿ ಮಾಡಿದ್ದು, ಈ ಬಗ್ಗೆ ಮಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅ.ಕ್ರ. 54/2022 ಪ್ರಕರಣಕ್ಕೆ ಸಂಬಂಧಿಸಿ, ಮಂಗಳೂರಿನ ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ದಿನಾಂಕ 6.12.2025 ರಂದು ಒರ್ವ ಸುಡಾನ್ ದೇಶದ ಪ್ರಜೆ ಸಹಿತ 5 ಆರೋಪಿಗಳಿಗೆ 12 ರಿಂದ 14 ವರ್ಷದ ತನಕ ಕಠಿಣ ಸಜೆ ಮತ್ತು ದಂಡದ ಶಿಕ್ಷೆ ವಿಧಿಸಿ ಮಾನ್ಯ ನ್ಯಾಯಾಲಯವು ತೀರ್ಪು ನೀಡಿರುತ್ತದೆ.
ಈ ಪ್ರಕರಣದಲ್ಲಿ ಅಭಿಯೋಜನೆಯ ಪರವಾಗಿ ಸಮರ್ಥವಾಗಿ ವಾದ ಮಂಡಿಸಿ, ಸಾಕ್ಷ್ಯಾಧಾರಗಳನ್ನು ನ್ಯಾಯಾಲಯದ ಮುಂದೆ ಸಾಬೀತುಪಡಿಸುವಲ್ಲಿ ಮಹತ್ತರ ಪಾತ್ರ ವಹಿಸಿದ ಸರಕಾರಿ ಅಭಿಯೋಜಕರಾದ ಶ್ರೀಮತಿ ಜುಡಿತ್ ಓಲ್ಗ ಮಾರ್ಗರೇಟ್ ಕ್ರಾಸ್ತಾ ಇವರನ್ನು ಶ್ರೀ ಸುಧೀರ್ ಕುಮಾರ್ ರೆಡ್ಡಿ, ಐಪಿಎಸ್, ಪೊಲೀಸ್ ಆಯುಕ್ತರು, ಮಂಗಳೂರು ನಗರ ಇವರು ಪೊಲೀಸ್ ಆಯುಕ್ತರ ಕಛೇರಿಯಲ್ಲಿ ಈ ದಿನ ಪೊಲೀಸ್ ಇಲಾಖೆಯ ವತಿಯಿಂದ ಸನ್ಮಾನಿಸಿ ಅಭಿನಂದಿಸಿದರು. ಈ ಸಂದರ್ಭ ಶ್ರೀ ಮಿಥುನ್ ಐಪಿಎಸ್, ಡಿಸಿಪಿ, ಕಾನೂನು ಮತ್ತು ಸುವ್ಯವಸ್ಥೆ, ಶ್ರೀ ರವೀಶ್ ನಾಯಕ್, ಎಸಿಪಿ ಸೆನ್ ಪೊಲೀಸ್ ಠಾಣೆ ಉಪಸ್ಥಿತರಿದ್ದರು.


















