ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಅಂಗಾಂಗ ದಾನ
ಹಾವೇರಿ ಜಿಲ್ಲೆಯ ಹಲ್ಲೂರು ಗ್ರಾಮದ 23 ವರ್ಷದ ಯುವತಿ ಕವನ ಎಂಬವರು ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ಬಳಿ ರಸ್ತೆ ಅಪಘಾತಕ್ಕೀಡಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸೆ.12ರಂದು ಮಧ್ಯಾಹ್ನ ನಗರದ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತಲೆಗೆ ಗಂಭೀರ ಗಾಯದಿಂದ ಅವರ ಮಿದುಳು ನಿಷ್ಕ್ರೀಯಗೊಂಡಿತ್ತು. ಇದನ್ನು ತಿಳಿದ ಕವನಳ ಸಹೋದರಿ ಅಂಗಾಂಗ ದಾನಕ್ಕೆ ಮುಂದಾದರು. ಈ ಮಾಹಿತಿಯನ್ನು ಆಸ್ಪತ್ರೆಯಿಂದ ಜೀವನ ಸಾರ್ಥಕತೆ ಕರ್ನಾಟಕ ಸರ್ಕಾರದಿಂದ ಸ್ಥಾಪಿತವಾದ ಮೃತ ದಾನಿ ಮಾನವ ಅಂಗಾಂಗಗಳ ಕಸಿ ಕಾರ್ಯಕ್ರಮದ ಅನುಷ್ಠಾನವನ್ನು ನೋಡಿಕೊಳ್ಳುವ ಸಂಸ್ಥೆಗೆ ತಿಳಿಸಲಾಯಿತು. ದಾನಿಯ ಸಹೋದರಿ ತಾಯಿ, ಹಾಗೂ ಕುಟುಂಬಸ್ಥರಿಂದ ಒಪ್ಪಿಗೆ ಪಡೆದು ಅಂಗಾಂಗ ದಾನ ಪ್ರಕ್ರಿಯೆಯನ್ನು ಪ್ರಾರಂಭಿಸಲಾಯಿತು.
ಜೀವನ ಸಾರ್ಥಕತೆ ಸಂಸ್ಥೆಯ ನಿರ್ದೇಶನದಂತೆ ಅಂಗಾಂಗಳನ್ನು ನೀಡಲಾಯಿತು. ಒಂದು ಕಿಡ್ನಿಯನ್ನು ಎಜೆ ಆಸ್ಪತ್ರೆಯಲ್ಲಿ ಕಸಿ ಮಾಡಲಾಯಿತು. ಲಿವರ್ ಬೆಂಗಳೂರಿನ ಆಸ್ಕರ್ ಸಿಎಂಐಗೆ, ಹೃದಯ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ಮತ್ತು ಒಂದು ಕಿಡ್ನಿ, ಕಣ್ಣು ಮತ್ತು ಚರ್ಮವನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಕಳುಹಿಸಲಾಗಿದೆ.
ಎಜೆ ಆಸ್ಪತ್ರೆಯ ಆಂಬ್ಯುಲೆನ್ಸ್ನಲ್ಲಿ ಲಿವರ್ ಹಾಗೂ ಹೃದಯವನ್ನು ಮಂಗಳೂರು ವಿಮಾನ ನಿಲ್ದಾಣದ ಮೂಲಕ ಬೆಂಗಳೂರು ಆಸ್ಪತ್ರೆಗಳಿಗೆ ರವಾನಿಸಲಾಯಿತು. ಒಂದು ಕಿಡ್ನಿ, ಕಣ್ಣು ಮತ್ತು ಚರ್ಮವನ್ನು ಕೆಎಂಸಿ ಆಸ್ಪತ್ರೆಗೆ ರವಾನಿಸಲಾಯಿತು ಎಂದು ಎಜೆ ಆಸ್ಪತ್ರೆಯ ನಿರ್ದೇಶಕ ಡಾ. ಪ್ರಶಾಂತ್ ಮಾರ್ಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.