ಶೃಂಗೇರಿಗೆ ಪ್ರಯಾಣ ಬೆಳೆಸಿದ ರಾಷ್ಟ್ರಪತಿ ರಾಮನಾಥ ಕೋವಿಂದ್

ರಾಷ್ಟ್ರಪತಿ ರಾಮನಾಥ ಕೋವಿಂದ್  ಅವರ ಮೂರು ದಿನಗಳ ಕರ್ನಾಟಕ ರಾಜ್ಯ ಪ್ರವಾಸದ ಸಂದರ್ಭದಲ್ಲಿ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸಿ ಅಲ್ಲಿಂದ ಮೈಸೂರಿಗೆ ತೆರಳಿ ಗುರುವಾರ ರಾತ್ರಿ ಮಂಗಳೂರಿಗೆ ಆಗಮಿಸಿ ವಾಸ್ತವ್ಯ ಹೂಡಿದ್ದರು. ಕರಾವಳಿಯ ಆತಿಥ್ಯವನ್ನು ಸ್ವೀಕರಿಸಿ ಇಂದು ಬೆಳಗ್ಗೆ 10.45ಕ್ಕೆ ಶೃಂಗೇರಿಗೆ ಪ್ರಯಾಣ ಬೆಳೆಸಿದರು.

ಗುರುವಾರ ಸಂಜೆ 6:50ಕ್ಕೆ ಭಾರತೀಯ ವಾಯು ಪಡೆಯ ವಿಶೇಷ ವಿಮಾನದ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಳಿದಾಗ ಗೌರವ ರಕ್ಷೆಯೊಂದಿಗೆ ಸ್ವಾಗತಿಸಲಾಯಿತು. ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಕರಾವಳಿಯ ಎಳೆನೀರಿನ ಪಾನೀಯ  ನೀಡಲಾಯಿತು. ಕೋವಿಡ್ ನಿಯಮಾವಳಿಯ ಹಿನ್ನೆಲೆಯಲ್ಲಿ ಹಾರ, ಶಾಲು, ಸ್ಮರಣಿಕೆಗಳನ್ನು ರಾಷ್ಟ್ರಪತಿಗಳಿಗೆ ನೀಡಲು ಅವಕಾಶ ಇರಲಿಲ್ಲ.

ರಾಷ್ಟ್ರಪತಿ ರಾಮನಾಥ ಕೋವಿಂದ್ ನಗರದ ಸರ್ಕ್ಯೂಟ್ ಹೌಸ್‌ನಿಂದ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ರಾಷ್ಟ್ರಪತಿ ಅವರ ಪತ್ನಿ ಸರಿತಾ ಕೋವಿಂದ್, ಪುತ್ರಿ ಸ್ವಾತಿ ಜೊತೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಿ ಬೆಳಗ್ಗೆ 10:48ಕ್ಕೆ ವಿಶೇಷ ಹೆಲಿಕಾಪ್ಟರ್ ಮೂಲಕ ಶೃಂಗೇರಿಗೆ ತೆರಳಿದರು. ಅಲ್ಲಿಂದ ವಾಹನದ ಮೂಲಕ ಶೃಂಗೇರಿ ಶಾರದಾ ಪೀಠಕ್ಕೆ ತೆರಳಿ ಶಾರದಾ ಪೀಠದ ದರ್ಶನ, ಶೃಂಗೇರಿ ಶ್ರೀ ಭಾರತೀ ತೀರ್ಥ ಹಾಗೂ ಶ್ರೀ ವಿಭುದೇಶ ತೀರ್ಥ ಸ್ವಾಮೀಜಿಗಳ ಭೇಟಿಯ ಬಳಿಕ ಸಂಜೆ 4:10ಕ್ಕೆ ಶೃಂಗೇರಿ ಹೆಲಿಪ್ಯಾಡ್ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ರಾತ್ರಿ 8:10ಕ್ಕೆ ದೆಹಲಿಗೆ ತೆರಳಲಿದ್ದಾರೆ.

ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಕೂಡ ರಾಷ್ಟ್ರಪತಿಯವರೊಂದಿಗೆ ತೆರಳಿದರು.ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆವಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಪೊಲೀಸ್ ಆಯುಕ್ತ ಶಶಿಕುಮಾರ್ ಅವರು ಜಿಲ್ಲಾಡಳಿತದ ಪರವಾಗಿ ರಾಷ್ಟ್ರಪತಿಯವರನ್ನು ಬೀಳ್ಕೊಟ್ಟರು.

Related Posts

Leave a Reply

Your email address will not be published.