10 ರೂ. ಮೌಲ್ಯದ ಕಾಯಿನ್ ,ಅಪಪ್ರಚಾರಕ್ಕೆ ಕಿವಿಗೊಡದೆ ಮುಕ್ತವಾಗಿ ಬಳಸಿ : ಜೋ ಡಿಸೋಜ

ಪುತ್ತೂರು: ಪ್ರಸ್ತುತ ದೇಶದಾದ್ಯಂತ ಚಲಾವಣೆಯಲ್ಲಿರುವ 10 ರೂ. ಮೌಲ್ಯದ ಕಾಯಿನ್ ಆರ್‍ಬಿಐ ಸಂಯೋಜಿತ ಅಧಿಕೃತ ಚಲಾವಣೆಯಾಗಿದ್ದು, ಯಾರೂ ಅಪಪ್ರಚಾರಕ್ಕೆ ಕಿವಿಗೊಡದೆ ಮುಕ್ತವಾಗಿ ದೈನಂದಿನ ಹಣಕಾಸು ವ್ಯವಹಾರದಲ್ಲಿ ಬಳಸಬೇಕು ಎಂದು ಪುತ್ತೂರು ವರ್ತಕ ಸಂಘದ ಅಧ್ಯಕ್ಷ ಜೋ ಡಿಸೋಜ ಹಾಗೂ ಕೆನರಾ ಬ್ಯಾಂಕ್ ಪುತ್ತೂರು ವಿಭಾಗೀಯ ಮ್ಯಾನೇಜರ್ ನರೇಂದ್ರ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.10 ರೂ. ಕಾಯಿನ್ ಚಲಾವಣೆಯಲ್ಲಿ ಇಲ್ಲ ಎಂಬ ಕುರಿತು ಸಾರ್ವಜನಿಕ ವಲಯದಲ್ಲಿ ಪ್ರಚಾರವಾಗುತ್ತಿರುವ ಹಿನ್ನೆಲೆಯಲ್ಲಿ ಪುತ್ತೂರು ಪ್ರೆಸ್ ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಶುಕ್ರವಾರ ಮಾಹಿತಿ ನೀಡಿದರು.

10 ರೂ. ಕಾಯಿನ್‍ಗಳು ಭಾರತ ಸರಕಾರದಡಿಯಲ್ಲಿ ಬರುವ ರಿಸರ್ವ್ ಬ್ಯಾಂಕ್ ಸಂಯೋಜನೆಯಲ್ಲಿ ಟಂಕಸಾಲೆಗಳಿಂದ ಹೊರಬಂದಿವೆ. ಸುಮಾರು 14 ವಿನ್ಯಾಸಗಳಲ್ಲಿ ಇವು ಚಲಾವಣೆಯಲ್ಲಿವೆ. ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಮೌಲ್ಯಗಳ ಪ್ರತಿನಿಧಿಸುವಿಕೆಯ ವಿವಿಧ ಲಕ್ಷಣಗಳನ್ನೂ ಇವು ಹೊಂದಿವೆ ಮತ್ತು ಸಮಯಕ್ಕೆ ತಕ್ಕಂತೆ ವಿನ್ಯಾಸಗಳಲ್ಲೂ ಬದಲಾವಣೆಯಾಗುತ್ತವೆ. ಈ ಕುರಿತು ಆರ್‍ಬಿಐ ವಿಶೇಷಣಗಳ ಮಾಧ್ಯಮ ಪ್ರಕಟನೆಯನ್ನೂ ಹೊರಡಿಸಿದೆ.ಸದ್ಯಕ್ಕೆ ವ್ಯಾಪಾರ, ವ್ಯವಹಾರ, ಸಾರಿಗೆ ಸೇರಿದಂತೆ ವಿವಿಧ ಆರ್ಥಿಕ ವ್ಯವಹಾರಗಳ ಸಂದರ್ಭದಲ್ಲಿ 10 ರೂ. ನಾಣ್ಯ ಬಳಕೆಯಲ್ಲಿಲ್ಲ ಎಂದು ನಿರಾಕರಿಸುವ ಪ್ರಕ್ರಿಯೆಗಳು ಕಂಡು ಬಂದಿವೆ. ಆದರೆ ಈ ಅಪಪ್ರಚಾರದಲ್ಲಿ ಯಾವುದೇ ಸತ್ಯಾಂಶವಿಲ್ಲ. ಆರ್‍ಬಿಐ 2016 ರಲ್ಲಿಯೇ ಪ್ರಕಟನೆ ಹೊರಡಿಸಿ ಈ 10 ರೂ. ಕಾಯಿನ್‍ಗಳು ಅಧಿಕೃತ ಮತ್ತು ವ್ಯವಹಾರದಲ್ಲಿ ಮುಕ್ತ ಚಲಾವಣೆಗೆ ಸ್ವೀಕಾರಾರ್ಹವೆಂದು ಪ್ರಕಟನೆಯನ್ನೂ ಹೊರಡಿಸಿದೆ ಎಂದು ಹೇಳಿದರು.

10 ರೂ. ಕಾಯಿನ್ ಚಲಾವಣೆಗೆ ಸಂಬಂಧಿಸಿದಂತೆ ಅಪಚಾರ ಮಾಡುವುದು ಮತ್ತು ಸ್ವೀಕರಿಸಲು ನಿರಾಕರಿಸುವುದು ಶಿಕ್ಷಾರ್ಹ ಅಪರಾಧವೂ ಹೌದು. ಹಣಕಾಸು ವ್ಯವಹಾರ ಕ್ಷೇತ್ರವನ್ನು ಸುಲಲಿತಗೊಳಿಸುವ ನಿಟ್ಟಿನಲ್ಲಿ ಬ್ಯಾಂಕ್, ವ್ಯಾಪಾರ ಕ್ಷೇತ್ರಗಳಲ್ಲಿಸೇರಿದಂತೆ ಎಲ್ಲಾ ವ್ಯವಸ್ಥೆಗಳಲ್ಲಿ 10 ರೂ. ಕಾಯಿನ್ ಬಳಕೆಯನ್ನು ಮುಕ್ತವಾಗಿ ಬಳಸುವ ಮೂಲಕ ಬೆಂಬಲಿಸಬೇಕು ಎಂದು ಲೀಡ್ ಬ್ಯಾಂಕ್ ಹಾಗೂ ವರ್ತಕ ಸಂಘದ ಪರವಾಗಿ ವಿನಂತಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಪುತ್ತೂರು ಕೆನರಾ ಬ್ಯಾಂಕ್ ಸೀನಿಯರ್ ಮ್ಯಾನೇಜರ್ ಶ್ರೀನಿವಾಸ್ ನಾಯಕ್, ವರ್ತಕ ಸಂಘದ ನಿಕಟಪೂರ್ವ ಅಧ್ಯಕ್ಷ ಸುರೇಂದ್ರ ಕಿಣಿ, ಮ್ಯಾನೇಜರ್ ಉಲ್ಲಾಸ್ ಪೈ ಉಪಸ್ಥಿತರಿದ್ದರು

Related Posts

Leave a Reply

Your email address will not be published.