ಕಾರ್ಮಿಕ ಸಂಹಿತೆಗಳ ವಿರುದ್ದ ಅಖಿಲ ಭಾರತ ಮಹಾಮುಷ್ಕರ – ಮಂಗಳೂರಿನಲ್ಲಿ ರಸ್ತೆತಡೆ ಹಾಗೂ ಪ್ರತಿಭಟನಾ ಪ್ರದರ್ಶನ
ಕಾರ್ಮಿಕ ವರ್ಗದ 29 ಪ್ರಮುಖ ಕಾನೂನುಗಳನ್ನು ರದ್ದುಗೊಳಿಸಿ, ಕಾರ್ಪೊರೇಟ್ ಪರ 4 ಸಂಹಿತೆಗಳನ್ನು ಜಾರಿಗೊಳಿಸಿದ ಕೇಂದ್ರ ಸರಕಾರದ ವಿರುದ್ಧ ಇಂದು (ಫೆಬ್ರವರಿ – 12) ರೈತ ಕಾರ್ಮಿಕರ ನೇತ್ರತ್ವದಲ್ಲಿ ಅಖಿಲ ಭಾರತ ಮಹಾಮುಷ್ಕರ ಅತ್ಯಂತ ಯಶಸ್ವಿಯಾಗಿ ಜರುಗಿದ್ದು,ಅದರ ಭಾಗವಾಗಿ ಮಂಗಳೂರಿನ ಹೃದಯಭಾಗದ ಕ್ಲಾಕ್ ಟವರ್ ಬಳಿಯಲ್ಲಿ ವಿವಿಧ ವಿಭಾಗದ ಕಾರ್ಮಿಕರು ನೌಕರರು ಜತೆಯಾಗಿ ಸೇರಿ ರಸ್ತೆತಡೆ ನಡೆಸಿ ಬಳಿಕ ಪ್ರತಿಭಟನಾ ಸಭೆಯನ್ನು ನಡೆಸಿದರು

500ಕ್ಕೂ ಮಿಕ್ಕಿದ ಪ್ರತಿಭಟನಾಕಾರರು, ಕಾರ್ಪೊರೇಟ್ ಹಿತಾಸಕ್ತಿಗಳನ್ನು ತನ್ನ ಮೂಲಮಂತ್ರವನ್ನಾಗಿಸಿದ ಕೇಂದ್ರ ಸರಕಾರದ ವಿರುದ್ದ ಆಕ್ರೋಶಭರಿತರಾಗಿ ಘೋಷಣೆಗಳನ್ನು ಕೂಗುವ ಮೂಲಕ ಲೇಬರ್ ಕೋಡ್ ಗಳನ್ನು ವಾಪಸ್ ಪಡೆಯಲು ಒಕ್ಕೊರಳಿನಿಂದ ಒತ್ತಾಯಿಸಿದರು.
ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದ CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು, ಅಚ್ಛೇದಿನ್ ತರುವುದಾಗಿ ದೇಶದ ಜನತೆಯ ಮುಂದೆ ವಾಗ್ದಾನ ಮಾಡಿದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕಳೆದ 12 ವರ್ಷಗಳಲ್ಲಿ ದೇಶದ ಸಂಪತ್ತನ್ನು ದೋಚಿದ್ದಲ್ಲದೆ ಕಾರ್ಪೊರೇಟ್ ಗಳ ಪರವಾಗಿ ತನ್ನೆಲ್ಲಾ ನೀತಿ ನಿರೂಪಣೆಗಳನ್ನು ರೂಪಿಸಿದೆ.ದೇಶದ ಜನಸಾಮಾನ್ಯರ ಬದುಕನ್ನು ಸಂಕಷ್ಟಕ್ಕೆ ದೂಡಿದೆ.ಕಾರ್ಮಿಕ ಕಾನೂನುಗಳನ್ನು ಇಲ್ಲವಾಗಿಸಿದ ಕೇಂದ್ರ ಸರಕಾರ ದೇಶದ ಗುತ್ತೇದಾರಿ ಬಂಡವಾಳಿಗರ ಪರವಾಗಿ ಸಂಹಿತೆಗಳನ್ನು ಜಾರಿಮಾಡಿದೆ.90% ಕಾರ್ಮಿಕರ ಬದುಕಿಗೆ ರಕ್ಷಣೆ ನೀಡದ ಲೇಬರ್ ಕೋಡ್ ಗಳು ಕಾರ್ಪೊರೇಟ್ ಕೋಡ್ ಗಳಲ್ಲದೆ ಮತ್ತೇನು ಎಂದು ಪ್ರಶ್ನಿಸಿರುವ ಅವರು,ಈ ಮಹಾಮುಷ್ಕರದಲ್ಲಿ ದೇಶದ 40 ಕೋಟಿಗೂ ಮಿಕ್ಕಿದ ರೈತ ಕಾರ್ಮಿಕರು ನೌಕರರು ಭಾಗವಹಿಸುವ ಮೂಲಕ ಕೇಂದ್ರ ಸರ್ಕಾರಕ್ಕೆ ಛಡಿಯೇಟು ಬೀಸಿದ್ದಾರೆ.ಲೇಬರ್ ಕೋಡ್ ಹಾಗೂ ರೈತ ವಿರೋಧಿ ಬೀಜ ಮಸೂದೆ,ವಿದ್ಯುತ್ ಮಸೂದೆಗಳನ್ನು ಈ ಕೂಡಲೇ ವಾಪಸ್ ಪಡೆಯದಿದ್ದಲ್ಲಿ ಇನ್ನಷ್ಟು ಸಮರಶೀಲ ಹೋರಾಟಗಳನ್ನು ನಡೆಸುವುದರಲ್ಲಿ ಸಂಶಯವಿಲ್ಲ ಎಂದು ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಿದರು.

AITUC ಜಿಲ್ಲಾ ನಾಯಕರಾದ ಎಚ್ ವಿ ರಾವ್ ರವರು ಮಾತನಾಡಿ, ಮಹಾತ್ಮ ಗಾಂಧೀಜಿಯ ಹೆಸರಿನಲ್ಲಿದ್ದ,ಗ್ರಾಮೀಣ ಜನತೆಯ ಉಸಿರಾಗಿದ್ದ ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನೇ ಬದಲಿಸಿ, ಮುಂಬರುವ ದಿನಗಳಲ್ಲಿ ಆ ಯೋಜನೆಯನ್ನು ಕತ್ತು ಹಿಸುಕಿ ಸಾಯಿಸಲು ಹೊರಟ ಕೇಂದ್ರ ಸರಕಾರದ ಕುತಂತ್ರವನ್ನು ದೇಶದ ಜನತೆ ಅರ್ಥೈಯಿಸಬೇಕಾಗಿದೆ ಎಂದು ಹೇಳಿದರು.
ದ.ಕ.ಜಿಲ್ಲಾ ಬ್ಯಾಂಕ್ ನೌಕರರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ವಿನ್ಸೆಂಟ್ ಡಿಸೋಜರವರು ಮಾತನಾಡಿ, ದೇಶದ ಅರ್ಥ ವ್ಯವಸ್ಥೆಗೆ ಭಾರೀ ಕೊಡುಗೆ ನೀಡಿದ ರಾಷ್ಟ್ರೀಕೃತ ಬ್ಯಾಂಕುಗಳನ್ನೇ ಇಲ್ಲವಾಗಿಸಲು ವಿಲಿನೀಕರಣದ ಹೆಸರಿನಲ್ಲಿ ಅದೆಷ್ಟೋ ಬ್ಯಾಂಕುಗಳನ್ನು ಹೇಳ ಹೆಸರಿಲ್ಲದಂತೆ ಮಾಡಿದ ಕೇಂದ್ರ ಸರಕಾರ ಇಂದು ವಿಮಾ ವಲಯವನ್ನು ಕೂಡ 100% ದಷ್ಟು ವಿದೇಶೀ ನೇರ ಹೂಡಿಕೆಗೆ ಒಳಪಡಿಸಿದೆ.ಈ ಮೂಲಕ ದೇಶದ ಅರ್ಥ ವ್ಯವಸ್ಥೆಯನ್ನು ಬುಡಮೇಲುಗೊಳಿಸಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ CITU ಜಿಲ್ಲಾ ನಾಯಕರಾದ ಯೋಗೀಶ್ ಜಪ್ಪಿನಮೊಗರುರವರು ಅಖಿಲ ಭಾರತ ಮುಷ್ಕರದ ಮಹತ್ವವನ್ನು ವಿವರಿಸುತ್ತಾ,ಕೇಂದ್ರ ಸರಕಾರದ ರೈತ ಕಾರ್ಮಿಕ ವಿರೋಧಿ ನೀತಿಗಳನ್ನು ಎಳೆಎಳೆಯಾಗಿ ವಿವರಿಸಿದರು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಕರ್ನಾಟಕ ಬ್ಯಾಂಕ್ ನೌಕರರ ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ ಜಿ ಫಣೀಂದ್ರ, AITUC ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೀತಾರಾಮ ಬೇರಿಂಜ, ಬ್ಯಾಂಕ್ ನೌಕರರ ಮುಖಂಡರಾದ ಬಿ ಎಂ ಮಾಧವ, DYFI ಜಿಲ್ಲಾಧ್ಯಕ್ಷರಾದ ಬಿ ಕೆ ಇಮ್ತಿಯಾಜ್ ರವರು ಮಾತನಾಡಿ,ರೈತ ಕಾರ್ಮಿಕರ ಹಾಗೂ ಮಧ್ಯಮ ವರ್ಗದ ನೌಕರರ ಸಂಕಷ್ಟಗಳನ್ನು ವಿವರಿಸಿದರು.
ಪ್ರತಿಭಟನೆಯಲ್ಲಿ AITUC ಜಿಲ್ಲಾ ನಾಯಕರಾದ ವಿ ಕುಕ್ಯಾನ್, ಕರುಣಾಕರ್,ಕೃಷ್ಣಪ್ಪ ವಾಮಂಜೂರು,CITU ಜಿಲ್ಲಾ ನಾಯಕರಾದ ರವಿಚಂದ್ರ ಕೊಂಚಾಡಿ, ಸಂತೋಷ್ ಆರ್ ಎಸ್, ಮುಝಾಫರ್,ಜಯಂತಿ ಶೆಟ್ಟಿ, ಭಾರತಿ ಬೋಳಾರ,ಜಯಲಕ್ಷ್ಮಿ, ಬ್ಯಾಂಕ್ ನೌಕರರ ಸಂಘಟನೆಗಳ ನಾಯಕರಾದ ಪುರುಷೋತ್ತಮ ಪೂಜಾರಿ,ನಾಗೇಂದ್ರ,ಲೋಕೇಶ್, ವಕೀಲರ ಸಂಘಟನೆಯ ಮುಖಂಡರಾದ ಯಶವಂತ ಮರೋಳಿ,ವಿಮಾ ನೌಕರರ ಮುಖಂಡರಾದ ಬಿ ಎನ್ ದೇವಾಡಿಗ, ಹೋಟೇಲ್ ನೌಕರರ ಸಂಘದ ನಾಯಕರಾದ ಮೋಹನ್,ದಲಿತ ಸಂಘಟನೆಯ ಕೃಷ್ಣ ತಣ್ಣೀರುಬಾವಿ, ಆದಿವಾಸಿ ಸಂಘಟನೆಯ ಕೃಷ್ಣ ಇನ್ನಾ,ಶೇಖರ್ ವಾಮಂಜೂರು, ಕರಿಯ ಕೆ,DYFI ಜಿಲ್ಲಾ ನಾಯಕರಾದ ಸಂತೋಷ್ ಬಜಾಲ್,ನವೀನ್ ಕೊಂಚಾಡಿ, ತಯ್ಯುಬ್ ಬೆಂಗರೆ, ಯಶ್ ರಾಜ್ ಬಜಾಲ್, ಮಹಿಳಾ ಮುಖಂಡರಾದ ಪ್ರಮೀಳಾ ಶಕ್ತಿನಗರ, ಅಸುಂತ ಡಿಸೋಜ, ಯೋಗಿತಾ ಉಳ್ಳಾಲ, ಗೀತಾ ಸುರತ್ಕಲ್,ಫ್ಲೇವಿ ಕ್ರಾಸ್ತಾ ಅತ್ತಾವರ,ಬಂದರು ಶ್ರಮಿಕ ಸಂಘದ ಶರಣಪ್ಪ,ಸಾಧಿಕ್, ಜುಬೇರ್ ಮುಂತಾದವರು ಭಾಗವಹಿಸಿದ್ದರು


















