ಪಡುಬಿದ್ರಿ: ಅ.1ರಂದು ಪಡುಬಿದ್ರಿ ಬಂಟರ ಸಂಘದ ಆಶ್ರಯದಲ್ಲಿ ಸಿರಿಮುಡಿ ದತ್ತಿ ನಿಧಿ ಕಾರ್ಯಕ್ರಮ

ಪಡುಬಿದ್ರಿ ಬಂಟರ ಸಂಘದ ವ್ಯಾಪ್ತಿಯ ಸಮಾಜದ ಆರ್ಥಿಕ ದುರ್ಬಲರಿಗೆ, ಅಶಕ್ತರಿಗೆ, ಅನಾರೋಗ್ಯ ಪೀಡಿತರಿಗೆ, ಆರ್ಥಿಕ ಹಿಂದುಳಿದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪಡುಬಿದ್ರಿ ಬಂಟರ ಸಂಘ ಸಹಭಾಗಿತ್ವದ ಸಿರಿಮುಡಿ ದತ್ತಿ ನಿಧಿ ಯೋಜನೆಯಡಿ ಸಹಾಯಧನವನ್ನು ಅಕ್ಟೋಬರ್ 1ರಂದು ವಿತರಿಸಲಾಗುವುದು ಎಂದು ಬಂಟರ ಸಂಘದ ಅಧ್ಯಕ್ಷರಾದ ಡಾ| ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು ಹೇಳಿದರು.

ಅವರು ಪಡುಬಿದ್ರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಸುಮಾರು ರೂ. 20 ಲಕ್ಷ ಸಹಾಯಧನವನ್ನು ವಿತರಿಸಲಾಗುತ್ತದೆ. ಬಂಟರ ಸಂಘದ ವ್ಯಾಪ್ತಿಯಲ್ಲಿ ಪ್ರಪ್ರಥಮ ಬಾರಿಗೆ ಸಮಾಜದ ವೃದ್ಧರಿಗೆ ನಮ್ಮ ಸಂಘವು ಆಶ್ರಯವಾಗಬೇಕೆಂಬ ದೃಷ್ಟಿಯಿಂದ ಸುಮಾರು 6 ಎಕ್ರೆ ಜಾಗದಲ್ಲಿ ಬಂಟಾಶ್ರಯ, ಕುಟುಂಬ ಸೇವಾಶ್ರಮ ಎಂಬ ವೃದ್ಧಾಶ್ರಮ ನಿರ್ಮಿಸುವ ಯೋಜನೆ ಹಾಕಿಕೊಂಡಿದೆ.

ಪಡುಬಿದ್ರಿ ಬಂಟರ ಸಂಘದ ಸಹಭಾಗಿತ್ವದಲ್ಲಿ ಆರ್ಥಿಕ ಸಬಲೀಕರಣ ಮತ್ತು ಎಲ್ಲಾ ಸಮಾಜದವರಿಗೂ ಅನುಕೂಲವಾಗುವಂತೆ ಸಿರಿಮುಡಿ ಕ್ರೆಡಿಟ್ ಕೊ-ಆಪರೇಟಿವ್ ಬ್ಯಾಂಕ್ ಸ್ಥಾಪನೆಗೆ ಚಾಲನೆ ನೀಡಲಾಗುವುದು. ಶಾಸಕರಾದ ಗುರ್ಮೆ ಸುರೇಶ ಶೆಟ್ಟಿಯವರಿಗೆ ಸಮಾಜದ ವತಿಯಿಂದ ಅಭಿನಂದನೆ ನಡೆಯಲಿದ್ದು, ಹುಬ್ಬಳ್ಳಿಯ ಉದ್ಯಮಿ ರಾಜೇಂದ್ರ ಶೆಟ್ಟಿ ವಿವಿಧ ಗಣ್ಯರನ್ನು ಗೌರವಿಸಲಿದ್ದಾರೆ.

ಮುಂಬಯಿ ಬಂಟರ ಸಂಘದ ಅಧ್ಯಕ್ಷ ಎರ್ಮಾಳ್ ಚಂದ್ರಹಾಸ ಶೆಟ್ಟಿ, ಮುಂಬೈ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಸಿ.ಎ. ಸುರೇಂದ್ರ ಶೆಟ್ಟಿ ಅದಾನಿ ಸಮೂಹ ಸಂಸ್ಥೆಗಳ ಆಧ್ಯಕ್ಷರಾದ ಕಿಶೋರ ಆಳ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಬಂಟ್ಸ್ ವೆಲ್ ಫೇರ್ ಟ್ರಸ್ಟ್ ಅಧ್ಯಕ್ಷರಾದ ಎರ್ಮಾಳು ಶಶಿಧರ ಶೆಟ್ಟಿ, ಸಿರಿಮುಡಿ ದತ್ತಿ ನಿಧಿಯ ಅಧ್ಯಕ್ಷರು ಸಾಂತೂರು ಭಾಸ್ಕರ ಶೆಟ್ಟಿ, ಸಂಘದ ಕಾರ್ಯದರ್ಶಿ ಪ್ರಕಾಶ ಶೆಟ್ಟಿ ಪಡುಹಿತ್ಲು, ಕೋಶಾಧಿಕಾರಿ ರವಿ ಶೆಟ್ಟಿ ಗುಂಡ್ಲಾಡಿ ಮೊದಲಾದವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.