ಬೆಳ್ತಂಗಡಿ: ಶ್ರಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ದ್ರವ ಸಾರ ಜನಕ ಜಾಡಿಗಳ ವಿತರಣೆ
ಶ್ರಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಧರ್ಮಸ್ಥಳದ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಗೆ ದ್ರವ ಸಾರ ಜನಕ ಜಾಡಿಗಳ ವಿತರಣಾ ಕಾರ್ಯಕ್ರಮ ಧರ್ಮಸ್ಥಳ ಪ್ರವಚನ ಮಂಟಪದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಧರ್ಮಸ್ಥಳದ ಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು, ಪ್ರಸಕ್ತ ಪರಿಸ್ಥಿತಿಯಲ್ಲಿ ದಕ್ಷಿಣ ಕನ್ನಡದಲ್ಲಿ ಹಾಲಿನ ಉತ್ಪಾದನೆಯಲ್ಲಿ ಹೆಚ್ಚಿಸಿ ಕೊಳ್ಳಬೇಕಾದ ಅನಿವಾರ್ಯತೆಯಿದೆ. ಜಾನುವಾರುಗಳಿಗೆ ಕೃತಕ ಗರ್ಭಧಾರಣೆ ಮಾಡಲು ಪಶುವೈದ್ಯರು ಹಾಗೂ ಗರ್ಭಧಾರಣಾ ಕಾರ್ಯಕರ್ತರು ರೈತರ ಮನೆಬಾಗಿಲಿಗೆ ಹೋಗಬೇಕಾದ ಪರಿಸ್ಥಿತಿ ಇದೆ.
ಕಾರ್ಯಕರ್ತರು ತಮ್ಮ ದ್ವಿಚಕ್ರ ವಾಹನದಲ್ಲಿ ಸಣ್ಣ ಸಣ್ಣ ಥರ್ಮಸ್ ಪ್ಲಾಸ್ಕ್‍ಗಳಲ್ಲಿ ಕೊಂಡೊಯ್ದು ಕೃತಕ ಗರ್ಭ ಧಾರಣೆ ಮಾಡುವುದರಿಂದ ಗರ್ಭಧಾರಣಾ ಫಲಿತಾಂಶದಲ್ಲಿ ಹಿನ್ನಡೆ ಆಗಿದೆ. ಹಾಗಾಗಿ 45 ದ್ರವ ಸಾರ ಜನಕ ಜಾಡಿಯನ್ನೂ ಶ್ರಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ನೀಡುತ್ತಿದ್ದೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹೇಮಾವತಿ ಹೆಗ್ಗಡೆ, ಎಲ್.ಹೆಚ್. ಮಂಜುನಾಥ್, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀನಿವಾಸ್ ರಾವ್ ಮತ್ತಿತರರು ಉಪಸ್ಥಿತರಿದ್ದರು.