ಬ್ರಹ್ಮರಕೋಟ್ಲು ಟೋಲ್‍ಗೇಟ್ ಅವ್ಯವಸ್ಥೆ ವಿರುದ್ಧ ಆಕ್ರೋಶ
ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬ್ರಹ್ಮರಕೋಟ್ಲು ಟೋಲ್ ಗೇಟ್ ಅವ್ಯವಸ್ಥೆ ಹಾಗೂ ಬಂಟ್ವಾಳ ಕಂದಾಯ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧ ಎಸ್.ಡಿ.ಪಿ.ಐ ಪಕ್ಷದ ವತಿಯಿಂದ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಿದ್ದೇವೆ ಎಂದು ಎಸ್.ಡಿ.ಪಿ.ಐ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ , ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಇಲ್ಯಾಸ್ ತುಂಬೆ ತಿಳಿಸಿದ್ದಾರೆ.
ಬಿ.ಸಿ.ರೋಡ್ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಹಿಂದೆ ಟೋಲ್ ಬಲವಂತವಾಗಿ ಸಂಗ್ರಹ ಮಾಡುತ್ತಿರಲಿಲ್ಲ, ಅದರೆ ಇತ್ತೀಚಿನ ಕೆಲ ದಿನಗಳಿಂದ ರೌಡಿಶೀಟರ್ ಗಳ ಮೂಲಕ ಬಲವಂತವಾಗಿ ಟೋಲ್ ಸಂಗ್ರಹ ಮಾಡುವ ಕಾರ್ಯ ನಡೆಯುತ್ತಿದೆ. ಇದನ್ನು ಎಸ್.ಡಿ.ಪಿ.ಐ ಬಲವಾಗಿ ಖಂಡಿಸುತ್ತಿದೆ. ಟೋಲ್ ಸಂಗ್ರಹದ ಅವಧಿ ಮುಗಿದ ಬಳಿಕವೂ ಅನಧಿಕೃತವಾಗಿ ಟೋಲ್ ಸಂಗ್ರಹ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಈ ಟೋಲ್ ಗೇಟ್ ಆರಂಭವಾದ ಬಳಿಕ ಇಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕಿತ್ತು. ಆದರೆ ಇಲ್ಲಿ ಯಾವುದೇ ರೀತಿಯ ಸೌಕರ್ಯಗಳನ್ನು ನೀಡದೆ ಬಲವಂತವಾಗಿ ಟೋಲ್ ಸಂಗ್ರಹ ಮಾಡುವ ಕಾರ್ಯ ಮಾಡಲಾಗುತ್ತಿದೆ ಎಂದರು. ದಿನನಿತ್ಯ ಇಲ್ಲಿ ಗಲಾಟೆ ನಡೆಯುತ್ತಿದ್ದು, ಇಲ್ಲಿನ ವ್ಯವಸ್ಥೆ ಸರಿಯಾಗದಿದ್ದರೆ ಇದರ ವಿರುದ್ದ ಎಸ್.ಡಿ.ಪಿ.ಐ ಪಕ್ಷ ಹೋರಾಟ ಮಾಡಲು ಮುಂದಾಗಲಿದೆ ಎಂದರು.
ಬಂಟ್ವಾಳ ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ಹಾಗೂ ಬ್ರೋಕರ್ ಗಳ ಹಾವಳಿ ಅತಿಯಾಗಿದೆ. ಜನಸಾಮಾನ್ಯರ ಯಾವುದೇ ಕಡತಗಳ ವಿಲೇವಾರಿ ವಿಳಂಬ ವಾಗುತ್ತಿದೆ. ಅಕ್ರಮ ಸಕ್ರಮದ ಕಾಟ ತಾಳಲಾರದೆ ಈ ಹಿಂದಿನ ತಹಶಿಲ್ದಾರ್ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿದರು.
ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಈ ಬಾರಿ ಎಸ್ಡಿಪಿಐ ಚುನಾವಣಾ ಕಣದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ, ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಚುನಾವಣಾ ಪ್ರಭಾರಿ ಎಸ್.ಎಚ್.ಶಾಹುಲ್ ಹಮೀದ್, ಪ್ರಮುಖರಾದ ಮೂನಿಶ್ ಅಲಿ ಬಂಟ್ವಾಳ, ಶರೀಫ್ ವಳವೂರು ಉಪಸ್ಥಿತರಿದ್ದರು.