ದೇಶದಲ್ಲಿ ಅತಿ ದೊಡ್ಡ ಕೃತಕ ಅಂಗಾಂಗ ಜೋಡಣಾ ಶಿಬಿರ
ಬೆಂಗಳೂರು, ; ದೇಶಾದ್ಯಂತ ದಿವ್ಯಾಂಗರು, ವಿಶೇಷ ಚೇತನರು, ಅವಕಾಶ ವಂಚಿತರ ಶ್ರೇಯೋಭಿವೃದ್ಧಿಗಾಗಿ ಭಾರತದಾದ್ಯಂತ 38 ವರ್ಷಗಳಿಂದ ನಿರಂತರವಾಗಿ ಉದಾತ್ತ ಸೇವೆ ಸಲ್ಲಿಸುತ್ತಿರುವ ನಾರಾಯಣ್ ಸೇವಾ ಸಂಸ್ಥಾನ್ ಬೆಂಗಳೂರಿನಲ್ಲಿ ಮಾ. 19 ರಂದು ದೇಶದಲ್ಲಿಯೇ ಅತಿ ದೊಡ್ಡ ಉಚಿತ ಕೃತಕ ಅಂಗಾಂಗ ಜೋಡಣಾ ಶಿಬಿರ ಆಯೋಜಿಸಿದೆ. ಒಂದೇ ದಿನ 593 ಮಂದಿಗೆ ಕೃತಕ ಅಂಗಾಂಗ, ಕ್ಯಾಲಿಪರ್ ಗಳನ್ನು ಜೋಡಿಸಿ ದಿವ್ಯಾಂಗರ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿಸಲಾಗುತ್ತಿದೆ ಎಂದು ನಾರಾಯಣ್ ಸೇವಾ ಸಂಸ್ಥಾನ್ ವಕ್ತಾರ ರಜತ್ ಗೌರ್ ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇಡೀ ದೇಶದಲ್ಲಿ ಒಂದೇ ದಿನ ಇಷ್ಟೊಂದು ಮಂದಿಗೆ ಕೃತಕ ಅಂಗಾಂಗ ಜೋಡಿಸುತ್ತಿರುವುದು ಇದೇ ಮೊದಲು. ಮುಂಬರುವ ದಿನಗಳಲ್ಲಿ ಒಂದೇ ದಿನದಲ್ಲಿ ಇನ್ನೂ ಹೆಚ್ಚು ಮಂದಿಗೆ ಕೃತಕ ಅಂಗಾಂಗ ಮತ್ತು ಕ್ಯಾಲಿಪರ್ ಗಳನ್ನು ಅಳವಡಿಸುವ ಮೂಲಕ ಗಿನ್ನೆಸ್ ದಾಖಲೆ ಬರೆಯುವ ಉತ್ಸಾಹದಲ್ಲಿ ಕಾರ್ಯನಿರ್ವಹಿಸುತ್ತಿದೆ. ನಾರಾಯಣ್ ಸೇವಾ ಸಂಸ್ಥಾನ್ ಈ ವರೆಗೆ 33,033 ಮಂದಿಗೆ ಕೃತಕ ಅಂಗಾಂಗ ಜೋಡಣೆ, 4,33,933 ಮಂದಿ ದಿವ್ಯಾಂಗರಿಗೆ ಶಸ್ತ್ರ ಚಿಕಿತ್ಸೆ ನಡೆಸಿ ಮಹತ್ವದ ಸಾಧನೆ ಮಾಡಿದೆ. ಜೊತೆಗೆ ಇತರೆ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ. ಇದೀಗ ಬೆಂಗಳೂರಿನಲ್ಲಿ ದೇಶದಲ್ಲಿಯೇ ಅತಿದೊಡ್ಡ ಅಂಗಾಂಗ ಜೋಡಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಬಸವನಗುಡಿಯ ಬುಲ್ ಟೆಂಪಲ್ ರಸ್ತೆಯ ಬಿವಿಎಸ್ಎಸ್ ಮರಾಠ ಹಾಸ್ಟಲ್ ಬಳಿ ಈಗಾಗಲೇ ನೋಂದಾಯಿಸಿಕೊಂಡಿರುವವರು ಹೊಸ ಬದುಕಿಗೆ ಪಾದಾರ್ಪಣೆ ಮಾಡಲಿದ್ದಾರೆ. ಜನವರಿ 8 ಮತ್ತು 9 ರಂದು ಸಹ ಬೆಂಗಳೂರಿನಲ್ಲಿ ಉಚಿತ ಅಂಗಾಂಗ ಜೋಡಣಾ ಶಿಬಿರದಲ್ಲೂ ನೂರಾರು ಮಂದಿಯ ಬದುಕಿಗೆ ಮುನ್ನುಡಿ ಬರೆಯಲಾಗಿದೆ ಎಂದು ರಜತ್ ಗೌರ್ ಹೇಳಿದರು.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಹೊಸ ಬದುಕಿಗೆ ಕಾಲಿಡುತ್ತಿರುವವರನ್ನು ಹಾರೈಸಲಿದ್ದಾರೆ. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್, ಸಂಸದರಾದ ಪಿ.ಸಿ. ಮೋಹನ್, ತೇಜಸ್ವಿ ಸೂರ್ಯ, ಶಾಸಕರಾದ ಉದಯ್ ಗರುಡಾಚಾರ್, ಜಮೀರ್ ಅಹಮದ್ ಖಾನ್ ಮತ್ತಿತರರು ಈ ವಿಶೇಷ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಬೆಳಿಗ್ಗೆಯಿಂದ ಸಂಜೆವರೆಗೆ ನಡೆಯಲಿರುವ ಅಂಗಾಂಗ ಜೋಡಣೆ ನಂತರ ಎಲ್ಲಾ 593 ಮಂದಿ ಸಮಾರಂಭ ನಡೆಯುತ್ತಿರುವ ಸಭಾಂಗಣದಲ್ಲಿ ರಾಜ್ಯಪಾಲರ ಮುಂದೆ ಸಾಮೂಹಿಕವಾಗಿ ಪಥ ಸಂಚಲನ ಮಾಡಿ ಹೊಸ ಬದುಕಿಗೆ ಹರ್ಷೋಲ್ಲಾಸದಿಂದ ವಿಶ್ವಾಸದ ಹೆಜ್ಜೆ ಇಡಲಿದ್ದಾರೆ. ಜೊತೆಗೆ ಈ ಹಿಂದೆ ಕೃತಕ ಅಂಗಾಂಗ ಜೋಡಣೆ ಮಾಡಿಕೊಂಡಿರುವ ವಿಶೇಷ ಚೇತನ ಮಕ್ಕಳು ಸಾಹಸ ಮತ್ತು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಿದ್ದಾರೆ ಎಂದರು.
ದೈಹಿಕ, ಆರ್ಥಿಕ ಮತ್ತು ಸಾಮಾಜಿಕವಾಗಿ ಬಾಧಿತವಾದ ಸಮುದಾಯದ ಹಿತ ದೃಷ್ಟಿಯಿಂದ ಸೇವೆ ಸಲ್ಲಿಸುತ್ತಿರುವ ನಾರಾಯಣ್ ಸೇವಾ ಸಂಸ್ಥಾನ್ ಜೊತೆ ಜನರಲ್ ಮೋಟಾರ್ಸ್, ಟಿಟಿಪಿ ಟೆಕ್ನಾಲಜೀಸ್ ಮತ್ತು ನೆಯುಮನ್ ಎಸ್ಸಾರ್ ಸಂಸ್ಥೆಗಳು ಸಹ ಸಿ.ಎಸ್.ಆರ್. ಚಟುವಟಿಕೆಯಲ್ಲಿ ತೊಡಗಿದ್ದು, ದೇಶ ಮತ್ತು ವಿದೇಶಗಳಲ್ಲಿ ಅಗತ್ಯವಿರುವ ಕುಟುಂಬಗಳಿಗೆ ಸೌಲಭ್ಯ ಕಲ್ಪಿಸಲಾಗುತ್ತಿದೆ. ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಅಗತ್ಯವಿರುವ ಸಹಸ್ರಾರು ಮಂದಿಯನ್ನು ಗುರುತಿಸಿ ಆಹಾರ, ಬಟ್ಟೆ, ಪಡಿತರ ಕಿಟ್ ಗಳನ್ನು ವಿತರಿಸಿದೆ. ಅಪಘಾತ ಹಾಗೂ ಇನ್ನಿತರ ಕಾರಣಗಳಿದಾಗಿ ಕೈ, ಕಾಲು ಮತ್ತಿತರ ಅಂಗಗಳನ್ನು ಕಳೆದುಕೊಂಡವರ ಬದುಕು ನರಕಯಾತನೆಯಾಗುತ್ತದೆ. ಕೃತಕ ಅಂಗಾಂಗ ಸೃಜನೆಗೆ ಕ್ಯಾಡ್, ಕ್ಯಾಮ್ ತಂತ್ರಜ್ಞಾನ ಬಳಸಿ ಸಂತ್ರಸ್ತರ ದೇಹಕ್ಕೆ ಅನುಗುಣವಾಗಿ ವಿನ್ಯಾಸಗೊಳಿಸಿ ಅಳವಡಿಸಲಾಗುತ್ತಿದೆ. ನಾರಾಯಣ್ ಸೇವಾ ಸಂಸ್ಥಾನ್ ಪ್ರಯತ್ನದಿಂದ ಸಂತ್ರಸ್ತರು ಸುಗಮ ಜೀವನ ನಡೆಸಲು ಸಹಕಾರಿಯಾಗಿದೆ ಎಂದು ರಜತ್ ಗೌರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶಿಬಿರದ ಮುಖ್ಯಸ್ಥರಾದ ರೋಹಿತ್ ತಿವಾರಿ, ಬೆಂಗಳೂರು ನಾರಾಯಣ್ ಸೇವಾ ಸಂಸ್ಥಾನ್ ಆಶ್ರಮದ ಮುಖ್ಯಸ್ಥರಾದ ಕುಬಿಲಾಲ್ ಮವಾರಿಯಾ ಹಾಗೂ ನಾರಾಯಣ್ ಸೇವಾ ಸಂಸ್ಥಾನ್ ಸದಸ್ಯ ಸಂಜೀವ್, ಬೆಂಗಳೂರು ಮಾಧ್ಯಮ ಸಂಯೋಜಕ ಚಂದ್ರಶೇಖರಯ್ಯ ಮತ್ತಿತರರು ಉಪಸ್ಥಿತರಿದ್ದರು.