ನಾಡಕೋವಿಯಿಂದ ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ

ಪ್ರಗತಿಪರ ಕೃಷಿಕರಾದ ಭಾಸ್ಕರ್ ಹೆಗ್ಡೆ ತಮ್ಮ ಮನೆಯಲ್ಲಿ ನಾಡಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳದ ತೆಳ್ಳಾರಿನಲ್ಲಿ ಇಂದು ಬೆಳಗ್ಗೆ ನಡೆದಿದೆ.
ಕಾರ್ಕಳ ತಾಲೂಕಿನ ದುರ್ಗಾ ಗ್ರಾಮದ ನೀಲೆಬೆಟ್ಟು ಗುತ್ತು ಮನೆ ನಿವಾಸಿ ಭಾಸ್ಕರ ಹೆಗ್ಡೆ (63) ಆತ್ಮಹತ್ಯೆ ಮಾಡಿಕೊಂಡವರು. ಇಂದು ಬೆಳಗ್ಗೆ ಪತ್ನಿ ಅಡುಗೆ ಮನೆಯಲ್ಲಿದ್ದ ವೇಳೆ ಭಾಸ್ಕರ ಹೆಗ್ಡೆ ಮನೆಯಲ್ಲಿದ್ದ ನಾಡಕೋವಿಯಿಂದ ಸ್ವಯಂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರೆನ್ನಲಾಗಿದೆ. ಗುಂಡಿನ ಸದ್ದು ಕೇಳಿ ಪತ್ನಿ ಹೊರಗೋಡಿ ಬಂದಾಗ ಭಾಸ್ಕರ್ ರಕ್ತದ ಮಡುವಿನಲ್ಲಿ ಬಿದ್ದಿದ್ದರೆನ್ನಲಾಗಿದೆ.ಸಾವಯವ ಕೃಷಿಯ ಮೂಲಕ ಗುರುತಿಸಿಕೊಂಡಿದ್ದ ಭಾಸ್ಕರ ಹೆಗ್ಡೆ ದುರ್ಗಾ ಪಂಚಾಯತ್ ನ ಸದಸ್ಯರು, ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.ಕಾರ್ಕಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.