ಅಪಘಾತದಲ್ಲಿ ಗಾಯಾಳು ಬಾಲಕ ಮಿದುಳು ನಿಷ್ಕ್ರಿಯ : ಅಂಗಾಂಗ ದಾನಕ್ಕೆ ಮುಂದಾದ ಹೆತ್ತವರು
ಉಳ್ಳಾಲ : ಬಸ್ಸಿಂದ ಬಿದ್ದು ವಾರದಿಂದ ಚಿಂತಾಜನಕ ಸ್ಥಿತಿಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಪಿಯುಸಿ ವಿದ್ಯಾರ್ಥಿಯ ಮೆದುಳು ನಿಷ್ಕ್ರಿಯಗೊಂಡಿದ್ದು, ಹೆತ್ತವರು ಶೋಕದ ನಡುವೆಯೂ ಆಸ್ಪತ್ರೆಯಲ್ಲಿ ಅಂಗಾಂಗ ದಾನ ನಡೆಸುವ ತೀರ್ಮಾನಕ್ಕೆ ಮುಂದಾಗಿದ್ದಾರೆ.
ಸಿಟಿ ಬಸ್ಸಿಂದ ಎಸೆಯಲ್ಪಟ್ಟು ಒಂದು ವಾರದಿಂದ ಚಿಂತಾಜನಕ ಸ್ಥಿತಿಯಲ್ಲಿದ್ದ ಪಿಯು ವಿದ್ಯಾರ್ಥಿಯ ಮೆದುಳು ನಿಷ್ಕ್ರಿಯಗೊಂಡಿದ್ದು , ಮಡುಗಟ್ಟಿದ ಶೋಕದ ನಡುವೆಯೂ ಕುಟುಂಬ ವರ್ಗದವರು ವಿದ್ಯಾರ್ಥಿಯ ಅಂಗಾಂಗ ದಾನಗೈದಿದ್ದು ಸಾವಿನಲ್ಲೂ ವಿದ್ಯಾರ್ಥಿ ಸಾರ್ಥಕತೆ ಮೆರೆದಿದ್ದಾರೆ.
ಉಳ್ಳಾಲ ಮಾಸ್ತಿಕಟ್ಟೆ ನಿವಾಸಿ ತ್ಯಾಗರಾಜ್ – ಮಮತಾ ಕರ್ಕೇರ ದಂಪತಿ ಪುತ್ರ ಯಶರಾಜ್ (16) ಇವರ ಅಂಗಾಂಗ ದಾನಕ್ಕೆ ಹೆತ್ತವರು ಮುಂದಾಗಿದ್ದಾರೆ. ಯಶರಾಜ್ ನಗರದ ಅಲೋಶಿಯಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಯಾಗಿದ್ದರು. ಕಳೆದ ಸೆ.7 ರ ಬುಧವಾರ ಬೆಳಗ್ಗೆ ಯಶರಾಜ್ ಉಳ್ಳಾಲ , ಮಾಸ್ತಿಕಟ್ಟೆಯಿಂದ ಸಿಟಿ ಬಸ್ಸಲ್ಲಿ ಕಾಲೇಜಿಗೆ ಪಯಣಿಸುತ್ತಿದ್ದಾಗ ರಾ.ಹೆ. 66ರ ಅಡಂ ಕುದ್ರುವಿನಲ್ಲಿ ಬಸ್ಸಿನಿಂದ ಹೊರಗೆ ಎಸೆಯಲ್ಪಟ್ಟಿದ್ದ. ತಲೆಗೆ ಗಂಭೀರ ಗಾಯಗೊಂಡಿದ್ದ ಯಶರಾಜನ್ನ ನಗರದ ಇಂಡಿಯಾನ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ವಾರದಿಂದ ನಿರಂತರ ಚಿಕಿತ್ಸೆ ನೀಡುತ್ತಿದ್ದರೂ ಯಶರಾಜ್ ಆರೋಗ್ಯದಲ್ಲಿ ಚೇತರಿಕೆ ಕಾಣದೆ ಇಂದು ಮಧ್ಯಾಹ್ನ ಮೆದುಳು ನಿಷ್ಕ್ರಿಯಗೊಂಡಿದೆ.
ಹೆತ್ತವರು ಮದ್ಯಾಹ್ನವಷ್ಟೇ ಒಪ್ಪಿಗೆ ನೀಡಿದ್ದಾರೆ. ದಾನ ಪ್ರಕ್ರಿಯೆಗಳು ಆರಂಭವಾಗಬೇಕಾದರೆ ಸಮಯ ತಗಲುವುದು. ಆಸ್ಪತ್ರೆಯಿಂದ ಯಾವುದೇ ದೃಢೀಕರಣ ನೀಡಲಾಗಿಲ್ಲ ಎಂದು ಇಂಡಿಯಾನ ಆಸ್ಪತ್ರೆ ತಿಳಿಸಿದೆ.