ಮಂಗಳೂರು: ವಿಶ್ವ ದಾಖಲೆ ಬಳಿಕವೂ ರೆಮೋನಾ ನೃತ್ಯ: ಅನ್ನ, ಆಹಾರ, ನಿದ್ದೆಯನ್ನು ಬದಿಗೊತ್ತಿ ಭರತನಾಟ್ಯ ಪ್ರದರ್ಶನ

ಮಂಗಳೂರು: ದಾಖಲೆ ಮಾಡಬೇಕೆಂದು ಕೆಲವರು ಏನೇನೋ ಸಾಧನೆ ಮಾಡುತ್ತಿರುತ್ತಾರೆ. ಅದೇ ಮಾದರಿಯಲ್ಲಿ ಮಂಗಳೂರಿನ ವಿದ್ಯಾರ್ಥಿನಿ ನಿರಂತರ 7ದಿನಗಳ ಕಾಲ ಅನ್ನ, ಆಹಾರ, ನಿದ್ದೆಯನ್ನು ಬದಿಗೊತ್ತಿ ಬರೋಬ್ಬರಿ ೧೭೦ಗಂಟೆಗಳ ಭರತನಾಟ್ಯ ಪ್ರದರ್ಶನ ನೀಡುತ್ತಿದ್ದಾರೆ. ಇದೀಗ ರೆಮೋನಾ ಅವರು ಶನಿವಾರ ಸಂಜೆ ವೇಳೆಗೆ ವಿಶ್ವದಾಖಲೆ ಬರೆದಿದ್ದಾರೆ. ಬಳಿಕವೂ ಭರತ ನಾಟ್ಯ ಮುಂದುವರಿದಿದೆ.

ಮಂಗಳೂರಿನ ಸಂತ ಆಲೋಶಿಯಸ್ ಕಾಲೇಜಿನ ಅಂತಿಮ ಬಿ.ಎ. ಪದವಿವಿದ್ಯಾರ್ಥಿನಿ ರೆಮೋನಾ ಎವೆಟ್ಟೆ ಪಿರೇರಾ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ದಾಖಲೆ ಮಾಡಲು ಈ ಸಾಧನೆ ಮಾಡುತ್ತಿದ್ದಾರೆ. ಜು.21ರಂದು ಬೆಳಗ್ಗೆ 10.30ರಿಂದ ಸಂತ ಅಲೋಶಿಯಸ್ ಕಾಲೇಜಿನ ಎಲ್‌ಸಿಆರ್‌ಐ ಸಭಾಂಗಣದಲ್ಲಿ ಭರತನಾಟ್ಯ ಪ್ರದರ್ಶನ ಆರಂಭಿಸಿದ್ದು, ಜುಲೈ 28ರಂದು ಮುಕ್ತಾಯವಾಗಲಿದೆ.

ಪ್ರದರ್ಶನದ ಪ್ರತೀ ೩ಗಂಟೆಗೊಮ್ಮೆ ೧೫ನಿಮಿಷಗಳ ಕಾಲ ಮಾತ್ರ ವಿರಾಮದ ಸಮಯದಲ್ಲಿ ರೆಮೊನಾ ಕನಿಷ್ಠ ಪ್ರಮಾಣದ ಆಹಾರ ಸೇವಿಸುತ್ತಾರೆ. ನಿರಂತರ ವೈದ್ಯರ ಸಲಹೆ, ಫಿಸಿಯೋಥೆರಪಿ ಆರೈಕೆಯೊಂದಿಗೆ ಈ ಪ್ರದರ್ಶನ ನಡೆಸುತ್ತಿದ್ದಾರೆ. ಭರತನಾಟ್ಯದ ವಿವಿಧ ಪ್ರಕಾರಗಳೊಂದಿಗೆ ಲಘು ಶಾಸ್ತ್ರೀಯ, ದೇವರನಾಮಗಳಿಗೆ ಭರತನಾಟ್ಯ ಪ್ರದರ್ಶನ ನೀಡುತ್ತಿದ್ದಾರೆ. ರೆಕಾರ್ಡೆಡ್ ಹಾಡುಗಳನ್ನು ಬಳಸುತ್ತಿದ್ದಾರೆ.

ಈ ಹಿಂದೆ ಮಹಾರಾಷ್ಟ್ರದ ಸೃಷ್ಟಿ ಸುಧೀರ್ ಜಗತಾಪ್ ಎಂಬ ೧೬ವರ್ಷದ ಬಾಲಕಿ ನಿರಂತರ 127ಗಂಟೆ ಕಥಕ್ ನೃತ್ಯ ಪ್ರದರ್ಶನ ಮಾಡಿ ಗಿನ್ನೇಸ್ ವರ್ಲ್ಡ್ ರೆಕಾರ್ಡ್ ದಾಖಲಿಸಿದ್ದಳು. ರೆಮೋನಾ ಈ ದಾಖಲೆಯನ್ನು ಮುರಿದು 170ಗಂಟೆಗಳ ಕಾಲ ಭರತನಾಟ್ಯ ಪ್ರದರ್ಶನಕ್ಕೆ ಹೆಜ್ಜೆ ಹಾಕುತ್ತಿದ್ದಾರೆ.

ಈ ಸಂದರ್ಭದಲ್ಲಿ ಹಲವಾರು ಮಂದಿ ಗಣ್ಯರು ಭೇಟಿ ನೀಡಿ, ರೆಮೋನಾ ಪಿರೇರಾ ಅವರಿಗೆ ಹುರಿದುಂಬಿಸುತ್ತಾ, ಪ್ರೋತ್ಸಾಹ ನೀಡುತ್ತಿದ್ದಾರೆ. ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಅಲ್ವಾರಿಸ್,ಸಂಸ್ಥೆಯ ರೆಕ್ಟರ್ ಮೆಲ್ವಿನ್ ಪಿಂಟೋ ಎಸ್.ಜೆ, ಸೇರಿದಂತೆ ಮೊದಲಾದವರು ಭೇಟಿ ನೀಡಿದ್ರು.

ಇನ್ನು ರೆಮೋನಾ ಎವೆಟ್ಟೆ ಪಿರೇರಾ ತಮ್ಮ ಮೂರನೇ ವರ್ಷದಿಂದಲೇ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದು, ಕಳೆದ ೧೩ ವರ್ಷಗಳಿಂದ ಡಾ.ಶ್ರೀವಿದ್ಯಾ ಮುರಳೀಧರ್‌ರಲ್ಲಿ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದಾರೆ. ಈ ಸಾಧನೆಗೆ ರೆಮೊನಾ ಪ್ರತೀದಿನ ಸುಮಾರು ೫ರಿಂದ ೬ಗಂಟೆಗಳ ಕಾಲ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದಾರೆ. ಸದ್ಯ ಭರತನಾಟ್ಯದಲ್ಲಿ ವಿದ್ವತ್ ಪದವಿಗೆ ತಯಾರಿ ನಡೆಸುತ್ತಿದ್ದಾರೆ. ಇವರ ಈ ಪ್ರಯತ್ನಕ್ಕೆ ಯಶಸ್ಸು ಸಿಗಲಿ ಎಂಬುದೇ ನಮ್ಮ ಆಶಯ.

ಸೋಮವಾರ ನಡೆಯುವ ಕಾರ್ಯಕ್ರಮದಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್  ರೆಕಾರ್ಡ್ ತಂಡದಿಂದ  ಅಧಿಕೃತವಾಗಿ ಘೋಷಣೆ ಪಡೆದುಕೊಂಡು ಪ್ರಶಸ್ತಿಯನ್ನು ಪಡೆದುಕೊಳ್ಳಲಿದ್ದಾರೆ.

Related Posts

Leave a Reply

Your email address will not be published.