5ಕಿ.ಮೀ. ವ್ಯಾಪ್ತಿಗೆ ಟೋಲ್ ಸುಂಕ ವಿಧಿಸಿದ್ದರ ವಿರುದ್ದ ಪ್ರತಿಭಟನೆ

ಮಂಜೇಶ್ವರ: ತಲಪಾಡಿ ಟೋಲ್ ಗೇಟಿನ 5 ಕಿಲೋ ಮೀಟರ್ ವ್ಯಾಪ್ತಿಯಲ್ಲಿರುವ ತಲಪಾಡಿ ಗ್ರಾ. ಪಂ. ವ್ಯಾಪ್ತಿಯ ನಾಗರೀಕರಿಗೆ ಉಚಿತ ಪ್ರಯಾಣಕ್ಕೆ ಅನುಮತಿ ನೀಡಿರುವ ಟೋಲ್ ಅಧಿಕೃತರು ಕೇರಳದ 5 ಕಿಲೋ ಮೀಟರ್ ವ್ಯಾಪ್ತಿಗೆ ಸುಂಕವನ್ನು ವಿಧಿಸಿರುವ ತಾರತಮ್ಯದ ವಿರುದ್ಧ ನ್ಯಾಯಯುತವಾದ ಹೋರಾಟಕ್ಕೆ ಮಂಜೇಶ್ವರ ಗ್ರಾ. ಪಂ. ಅಧ್ಯಕ್ಷರ ನೇತೃತ್ವದಲ್ಲಿ ಚಾಲನೆ ನೀಡಿದ್ದಾರೆ.
ಕಾನೂನು ರೀತಿಯ ಹೋರಾಟಕ್ಕೆ ಚಾಲನೆಯನ್ನು ನೀಡಲಿರುವ ಹೋರಾಟ ಸಮಿತಿ ಮಂಜೇಶ್ವರದವರನ್ನು ಕಡೆಗಣಿಸಿದರೆ ಲೋಕೋಪಯೋಗಿ ಇಲಾಖೆಯಂದಿಗೆ ಚರ್ಚೆ ನಡೆಸಿ ನೂತನ ಹೆದ್ದಾರಿಗೆ ಮೊದಲು ಅಂದಿನ ಜನತೆ ಅಂತರಾಜ್ಯ ವಾಹನ ಸಂಚಾರಕ್ಕೆ ಬಳಸುತಿದ್ದ ಹಳೆಯ ರಾಷ್ಟ್ರೀಯ ಹೆದ್ದಾರಿಯನ್ನು ಮತ್ತೆ ಸಂಚಾರಯೋಗ್ಯವನ್ನಾಗಿ ಮಾಡಿ ಮಂಜೇಶ್ವರ ಗ್ರಾ.ಪಂ. ನೇತೃತ್ವದಲ್ಲಿ ನೂತನ ಸರ್ವೀಸ್ ರಸ್ತೆಯನ್ನು ನಿರ್ಮಾಣ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ.

ತಲಪಾಡಿ ಟೋಲ್ ಗೇಟ್ ಹೋರಾಟ ಸಮಿತಿ ಮಂಜೇಶ್ವರ ಇದರ ರೂಪೀಕರಣ ಸಭೆಯು ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜೀನ್ ಲೆವಿನ ಮೊಂತೆರೊ ಅವರ ಅಧ್ಯಕ್ಷತೆಯಲ್ಲಿ ಕಲಾ ಸ್ಪರ್ಷಮ್ ನಲ್ಲಿ ಜರುಗಿತು. ಟೋಲ್ ಹೋರಾಟ ಸಮಿತಿ ಅಧ್ಯಕ್ಷರಾಗಿ ಜೀನ್ ಲವೀನಾ ಮೊಂತೇರೋ, ಪ್ರದಾನ ಸಂಚಾಲಕರಾಗಿ ವಾರ್ಡ್ ಸದಸ್ಯರಾದ ಅಬ್ದುಲ್ ರಹೀಮ್ ರವರನ್ನು ಒಳಗೊಂಡ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿದೆ.
