ಎಂಸಿಸಿ ಬ್ಯಾಂಕಿನ ವಾರ್ಷಿಕ ಸಾಮಾನ್ಯ ಸಭೆ, ರೂ.10.38 ಕೋಟಿ ನಿವ್ವಳ ಲಾಭ, ಶೇಕಡಾ 10 ಡಿವಿಡೆಂಡ್ ಘೋಷಣೆ
ಎಂ.ಸಿ.ಸಿ. ಬ್ಯಾಂಕಿನ ವಾರ್ಷಿಕ ಮಹಾಸಭೆಯು ಮಂಗಳೂರಿನ ಸಂತ ಅಲೋಶಿಯಸ್ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೋ ಇವರ ಅಧ್ಯಕ್ಷತೆಯಲ್ಲಿ ಜರುಗಿತು.
ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ, ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವಾ ಮತ್ತು ವೃತ್ತಿಪರ ನಿರ್ದೇಶಕ ಸಿ.ಜಿ.ಪಿಂಟೊ ಇವರು ದೀಪ ಬೆಳಗಿಸುವ ಮೂಲಕ ಸಭೆಯನ್ನು ಆರಂಭಿಸಲಾಯಿತು. ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ, ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವಾ, ಸದಸ್ಯರಾದ ಆಲನ್ ಸಿ ಪಿರೇರಾ ಮತ್ತು ಸೆಲೆಸ್ಟಿನ್ ಲೀನಾ ಮೊಂತೇರೊ, ಮಾರ್ಜೊರಿ ಟೆಕ್ಷೆರಾ, ಹೆಚ್.ಡಿ.ಎಫ್.ಸಿ, ಬ್ಯಾಂಕಿನ ಮಾಜಿ ಸಿನಿಯರ್ ಎಕ್ಸಿಕ್ಯೂಟಿವ್ ಇವರು ಎಲ್ಲಾ ಸದಸ್ಯರ ಪರವಾಗಿ ಬ್ಯಾಂಕಿನ ಸಂಸ್ಥಾಪಕರಿಗೆ ಹೂ ಅರ್ಪಿಸುವ ಮೂಲಕ ಗೌರವಿಸಲಾಯಿತು.
ಎಂ.ಸಿ.ಸಿ. ಬ್ಯಾಂಕ್ ಎಂದು ಪ್ರಖ್ಯಾತವಾಗಿರುವ ಮಂಗಳೂರು ಕಥೋಲಿಕ್ ಕೋ ಆಪರೇಟಿವ್ ಬ್ಯಾಂಕ್, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅತ್ಯುತ್ತಮ ಪ್ರಗತಿ ಸಾಧಿಸಿದ್ದು 2022-23ನೇ ವಿತ್ತೀಯ ವರ್ಷದಲ್ಲಿ
ಶೇಕಡಾ 10% ಲಾಭಾಂಶ ಘೋಷಿಸಿರುತ್ತದೆ. ಜೊತೆಗೆ, ಬ್ಯಾಂಕ್ ಲಾಭ ಗಳಿಕೆಯಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸಿದ್ದು, ಬ್ಯಾಂಕಿನ ನಿವ್ವಳ ಲಾಭವು ರೂ.10.38 ಕೋಟಿಯಾಗಿರುತ್ತದೆ. ಇದು ಬ್ಯಾಂಕಿನ ಚರಿತ್ರೆಯಲ್ಲಿಯೇ ಅತ್ಯಂತ ಹೆಚ್ಚಿನ ಲಾಭ ಎಂದು ಎಂ.ಸಿ.ಸಿ. ಬ್ಯಾಂಕಿನ ಅಧ್ಯಕ್ಷ ಶ್ರೀ ಅನಿಲ್ ಲೋಬೊ ಹೇಳಿದರು. ಅವರು ಬ್ಯಾಂಕಿನ 105ನೇ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತಾನಾಡಿದರು. ಎಂ.ಸಿ.ಸಿ.ಬ್ಯಾಂಕ್ ಒಟ್ಟು ಠೇವಣಿಯಲ್ಲಿ ಶೇಕಡಾ 8.62% ಪ್ರಗತಿ ಸಾಧಿಸಿದ್ದು, ರೂ.577.95 ಕೋಟಿ ಠೇವಣಿ, ಒಟ್ಟು ಮುಂಗಡದಲ್ಲಿ ಶೇಕಡಾ 8.14% ಪ್ರಗತಿ ಸಾಧಿಸಿದ್ದು ರೂ.355.30 ಕೋಟಿ ಮುಂಗಡಗಳು, ದುಡಿಯುವ ಬಂಡವಾಳ ರೂ.684.31 ಕೋಟಿ’ ಮತ್ತು ಶೇರು ಬಂಡವಾಳ ರೂ.27.36 ಕೋಟಿ ಆಗಿದೆ ಎಂದರು. ಜೊತೆಗೆ ಬ್ಯಾಂಕಿನ ಎನ್.ಪಿ.ಎ, ಪ್ರಮಾಣವು ಕಳೆದ ಆರ್ಥಿಕ ವರ್ಷದಲ್ಲಿದ್ದ 1.62% ರಿಂದ 1.37%ಕ್ಕೆ ತಲುಪಿರುವುದು ಬ್ಯಾಂಕಿನ ಬೆಳವಣಿಗೆ ಉತ್ತಮವಾಗಿದೆ ಎಂಬುದನ್ನು ತೋರಿಸುತ್ತದೆ. ಬ್ಯಾಂಕಿನ ಅನುತ್ಪಾದಕ ಸಾಲಕ್ಕೆ ಒದಗಿಸಿದ ಅವಕಾಶದ ಅನುಪಾತವು 78.87% ಆಗಿರುತ್ತದೆ. ಬ್ಯಾಂಕಿನ ಅಖಂಖ ಪ್ರಮಾಣವು ಆರ್‌ಬಿಐ ನಿಗದಿಪಡಿಸಿರುವ ಕನಿಷ್ಟ ಮಿತಿ ಶೇಕಡಾ 9ಕ್ಕಿಂತ ಹೆಚ್ಚಿದ್ದು, 21.54% ಇರುತ್ತದೆ ಎಂದರು. ಬ್ಯಾಂಕಿನ ಪ್ರಗತಿಗೆ ಕಾರಣರಾದ ಗ್ರಾಹಕರು, ಸದಸ್ಯರು, ಸಿಬ್ಬಂದಿ ವರ್ಗ ಮತ್ತು ಹಿತೈಷಿಗಳನ್ನು ಅಭಿನಂದಿಸಿದರು.
ತಮ್ಮ ಮಾತನ್ನು ಮುಂದುವರಿಸುತ್ತಾ, 2022-2023 ಆರ್ಥಿಕ ವರ್ಷದಲ್ಲಿ ಬ್ಯಾಂಕಿನ ಅಭಿವೃದ್ಧಿಗಾಗಿ ನಿರಂತರ ಸಹಕಾರ ಮತ್ತು ಬೆಂಬಲ ನೀಡಿದ ಬ್ಯಾಂಕಿನ ಎಲ್ಲಾ ಸದಸ್ಯರಿಗೆ ಮತ್ತು ಹಿತೈಷಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು. ಬ್ಯಾಂಕಿನ ಸಾಧನೆಗಳಾದ ಸಿಬಿಎಸ್ ಸಾಫ್ಟ್‌ವೇರ್‌ನ ಉನ್ನತೀಕರಣ, ಡಿಜಿಟಲೀಕರಣ, ಪ್ರತ್ಯೇಕ ಭೂಕಂಪನ ವಲಯದಲ್ಲಿ ಡಿ.ಆರ್ ಕೇಂದ್ರದ ಸ್ಥಾಪನೆ, ಉತ್ಕೃಷ್ಟ ಗ್ರಾಹಕ ಸೇವೆ ನೀಡುವ ನಿಟ್ಟಿನಲ್ಲಿ ಶಾಖೆಗಳ ನವೀಕರಣ, ಗ್ರಾಹಕ ಸಂಪರ್ಕ ಸಭೆ, ಆಶೋಕನಗರ ಶಾಖೆಯ ಸ್ಥಳಾಂತರ, ಬ್ಯಾಂಕಿನ ಸೇವೆಗಳನ್ನು ಇನ್ನೂ ಐದು ಜಿಲ್ಲೆಗಳಲ್ಲಿ ವಿಸ್ತರಣೆ, ಶೇಕಡಾ 8.75 ಬಡ್ಡಿ ದರದಲ್ಲಿ ಶಿಕ್ಷಣ ಸಾಲ, ಇತ್ಯಾದಿ ಗ್ರಾಹಕರ ಸಹಕಾರದಿಂದಾಗಿ ಶೇಕಡಾ 90ರಷ್ಟು ಸಿ.ಕೆ.ವೈ.ಸಿ. ನೋಂದಾವಣೆ ಮಾಡಲಾಗಿದೆ ಎಂದರು. ಬ್ಯಾಂಕಿನ ಪ್ರಗತಿಗಾಗಿ ರಚನಾತ್ಮಕ ಸಲಹೆಗಳನ್ನು ನೀಡಲು ಸದಸ್ಯರನ್ನು ಕೋರಿದರು. ಬ್ಯಾಂಕಿನ ಆಡಳಿತ ಮಂಡಲಿಯನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದು, ಬ್ಯಾಂಕಿನ ಆಡಳಿತ ಮಂಡಳಿಯ ಮೇಲೆ ಇರಿಸಿದ ನಂಬಿಕೆ ಮಾತ್ರವಲ್ಲದೆ ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯೋನ್ಮುಖರಾಗಲು ಪ್ರೇರಣೆ ನೀಡಿದೆ ಎಂದರು. ಮುಂದುವರಿಯುತ್ತಾ ಶಿಸ್ತು ಮತ್ತು ಬ್ಯಾಂಕಿನ ಆರ್ಥಿಕ ಮಾನದಂಡಗಳಾದ ನಿವ್ವಳ ಮೌಲ್ಯ, ಅಖಂಖ, ಆಸ್ತಿಗಳ ಗುಣಮಟ್ಟದ ಹೆಚ್ಚಳ ಇತ್ಯಾದಿಗಳ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು. ಬ್ಯಾಂಕಿನ ಮುಂದಿನ ಉದ್ದೇಶ ಮತ್ತು ಗುರಿಗಳ ಬಗ್ಗೆ ಮಾತನಾಡುತ್ತಾ ಸುರತ್ಕಲ್, ಮೂಡಬಿದ್ರಿ ಮತ್ತು ಉಡುಪಿ ಶಾಖೆಗಳ ಸ್ಥಳಾಂತರ, ಇ-ಲಾಭಿಯ ಸ್ಥಾಪನೆ, ವಹಿವಾಟು ಮತ್ತು ಲಾಭದಲ್ಲಿನ ಹೆಚ್ಚಳ ಬಗ್ಗೆ ತಿಳಿಸಿದರು. ಸಂಪ್ಟೆಂಬರ್ 2024ರಲ್ಲಿ ನಡೆಯುವ ಮುಂದಿನ ವಾರ್ಷಿಕ ಮಹಾಸಭೆಗೆ ಇನ್ನೂ ಉತ್ತಮವಾದ ಫಲಿತಾಂಶದೊಂದಿಗೆ ಬರಲಿದ್ದೇನೆ ಎಂದರು.
ಉಪಾಧ್ಯಕ್ಷ ಶ್ರೀ ಜೆರಾಲ್ಡ್ ಜೂಡ್ ಡಿಸಿಲ್ವಾ 104ನೇ ವಾರ್ಷಿಕ ಸಾಮಾನ್ಯ ಸಭೆಯ ವರದಿಗಳನ್ನು ಓದಿದರು. 2022-23ರ ಲೆಕ್ಕ ಪರಿಶೋಧಿತ ಹಣಕಾಸು, ಲೆಕ್ಕ ಪರಿಶೋಧನಾ ವರದಿ, 2023-24ರ ಆರ್ಥಿಕ ವರ್ಷದ ಚಟುವಟಿಕೆಗಳ ಕಾರ್ಯಕ್ರಮ ಮತ್ತು 2023-24ರ ಬಜೆಟ್ ಅನ್ನು ಸಾಮಾನ್ಯ ಸಭೆಯ ಮುಂದೆ ಮಂಡಿಸಿ, ಅನುಮೋದನೆ ಪಡೆಯಲಾಯಿತು.
ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅಧ್ಯಕ್ಷರು, ಸದಸ್ಯರು ನೀಡಿದ ಸಲಹೆ ಸೂಚನೆಗಳನ್ನು ಪರಿಗಣನೆಗೆ ತೆಗೆದುಕೊಂಡು ಮುಂದಿನ ವರ್ಷದಲ್ಲಿ ಕಾರ್ಯಗತಗೊಳಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ನಿರ್ದೆಶಕರಾದ ಶ್ರೀ ಅಂದ್ರೂ ಡಿಸೋಜ, ಜೋಸೆಫ್ ಎಮ್, ಅನಿಲ್ ಪತ್ರಾವೊ, ಡಾ| ಜೆರಾಲ್ಡ್ ಪಿಂಟೊ, ಡೇವಿಡ್ ಡಿಸೋಜ, ಎಲ್‌ರೊಮ್ ಕಿರಣ್ ಕ್ಯಾಸ್ಟ್, ರೋಶನ್ ಡಿ’ಸೋಜ, ಹೆರಾಲ್ಡ್ ಮೊಂತೇರೊ, ಜೆ. ಪಿ. ರೊಡ್ರಿಗಸ್, ವಿನ್ಸೆಂಟ್ ಲಸ್ರಾದೊ, ಮೆಲ್ವಿನ್ ವಾಸ್, ಶ್ರೀಮತಿ ಐರಿನ್ ರೆಬೆಲ್ಲೊ, ಡಾ| ಕ್ರೀಡಾ ಡಿಸೋಜ, ವೃತ್ತಿಪರ ನಿರ್ದೇಶಕರಾದ ಸಿ.ಜಿ, ಪಿಂಟೊ, ಸುಸಾಂತ್ ಸಾನಾ, ಮಹಾಪ್ರಬಂಧಕ ಸುನಿಲ್ ಮಿನೇಜಸ್, ಉಪ ಮಹಾಪ್ರಬಂಧಕ ರಾಜ್ ಎಫ್. ಮಿನೇಜಸ್ ಉಪಸ್ಥಿತರಿದ್ದರು.
ಮಹಾಪ್ರಬಂಧಕ ಸುನಿಲ್ ಮಿನೇಜಸ್ ಸ್ವಾಗತಿಸಿ, ಕಿರಿಯ ಸಹಾಯಕ ಆಡ್ಮಿನ್ ಡಿಸೋಜ ನಿರೂಪಿಸಿದರು. ಅಧ್ಯಕ್ಷ ಶ್ರೀ ಆನಿಲ್ ಲೋಬೊ ವಂದಿಸಿದರು.