ಮೂಡುಬಿದರೆ : ಅಕ್ಷರದಾಸೋಹ ನೌಕರರ ಪ್ರತಿಭಟನೆ

ಮೂಡುಬಿದಿರೆ : ಸರಕಾರಿ ಮತ್ತು ಅನುದಾನ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಅಕ್ಷರ ದಾಸೋಹ ನೌಕರರ ಸಮಸ್ಯೆಗಳನ್ನು ಸರಕಾರ ಪರಿಹರಿಸಬೇಕು ಎಂದು ಆಗ್ರಹಿಸಿ, ಮೂಡುಬಿದಿರೆ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ತಾಲೂಕಿನ ಕ.ರಾ. ಅಕ್ಷರ ದಾಸೋಹ ನೌಕರರ ಸಂಘದವರು ಪ್ರತಿಭಟನೆ ನಡೆಸಿದರು.

ಮೂಡುಬಿದಿರೆ ಸಿಐಟಿಯುನ ಮಾಜಿ ಅಧ್ಯಕ್ಷೆ ರಮಣಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ ದಿನಕ್ಕೆ ಆರು ಗಂಟೆಗಿಂತಲೂ ಅಧಿಕ ಸಮಯ ಕೆಲಸ ಮಾಡುವ ಅನಿವಾರ್ಯ ಪರಿಸ್ಥಿತಿಯಲ್ಲಿರುವ ರಾಜ್ಯದ 1,17,000 ಮಂದಿ ಆಕ್ಷರ ದಾಸೋಹ ನೌಕರರಿಗೆ ಕನಿಷ್ಟ ಕೂಲಿ ರೂ. 21,000 ನೀಡಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಸಮಿತಿ ಪ್ರ. ಕಾರ್ಯದರ್ಶಿ ಗಿರಿಜಾ ಮಾತನಾಡಿ, ಎಲ್ಲ ಶಾಲೆಗಳಲ್ಲಿ ಕನಿಷ್ಟ ಇಬ್ಬರು ಅಡುಗೆಯವನ್ನು ನೇಮಿಸಬೇಕು. ಶಿಕ್ಷಕರಿಗೆ ರಜಾ ಸಂಬಳ ಇರುವಂತೆ, ಆಕ್ಷರ ದಾಸೋಹದ ನೌಕರರಿಗೂ ಎಪ್ರಿಲ್, ಮೇ ಮತ್ತು ಅಕ್ಟೋಬರ ರಜೆಗಳ ಸಮಯ ಸಂಬಳ ನೀಡಬೇಕು. ಈ ನೌಕರರು ಅಡುಗೆ ಕೆಲಸದ ಜತೆಗೆ ಶಾಲಾ ಸ್ವಚ್ಛತೆ, ಕೈತೋಟ ನಿರ್ವಹಣೆ ಮತ್ತಿತರ ಕೆಲಸವನ್ನೂ ಮಾಡುವುದರಿಂದ ಅವರನ್ನು `ಡಿ’ ಗ್ರೂಪ್ ನೌಕರರನ್ನಾಗಿ ಪರಿಗಣಿಸಬೇಕು ಎಂದರು.

ಈ ಸಂದರ್ಭದಲ್ಲಿ ಸಿಐಟಿಯು ಅಧ್ಯಕ್ಷ ಶಂಕರ, ಅಕ್ಷರ ದಾಸೋಹ ನೌಕರರ ಸಂಘದ ಮೂಡುಬಿದಿರೆ ತಾಲೂಕು ಅಧ್ಯಕ್ಷೆ ಶೋಭಾ, ಕೋಶಾಧಿಕಾರಿ ರಂಜನಿ, ಕಾರ್ಯದರ್ಶಿ ಯಶೋದಾ ಮತ್ತಿತರ ಪದಾಧಿಕಾರಿಗಳು, ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಮುಖ್ಯಮಂತ್ರಿಯವರಿಗೆ ತಾಲೂಕು ತಹಶೀಲ್ದಾರರ ಮೂಲಕ ಮನವಿಪತ್ರ ಸಲ್ಲಿಸಲಾಯಿತು.

Related Posts

Leave a Reply

Your email address will not be published.