ಪಡುಬಿದ್ರಿ: ನೀರು ಪೋಲಾಗುತ್ತಿದ್ದರೂ ಅಧಿಕಾರಿಗಳು ಮೌನ: ಗ್ರಾಮಸ್ಥರ ಆಕ್ರೋಶ
ಪಡುಬಿದ್ರಿಯ ಜನತೆ ಕುಡಿಯುವ ನೀರಿಗಾಗಿ ಜನ ಒಂದು ಕಡೆ ಹಾಹಾಕಾರ ಪಡುತ್ತಿದ್ದರೆ, ಮತ್ತೊಂದು ಕಡೆ ನಿರಂತರವಾಗಿ ಕುಡಿಯುವ ನೀರು ಪೊಲಾಗುತ್ತಿದ್ದರೂ ನಿಗಾ ವಹಿಸಬೇಕಾಗಿದ್ದ ಗ್ರಾ.ಪಂ. ಅಧಿಕಾರಿಗಳು ಸಹಿತ ಆಡಳಿತ ಸಮಿತಿ ಮೌನವಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಪಡುಬಿದ್ರಿ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಅಲ್ಲಿ ಇಲ್ಲಿ ಅಲೆದಾಡುವ ಸ್ಥಿತಿ ಇದೆ. ಆದರೆ ಪಡುಬಿದ್ರಿ ಸರ್ಕಾರಿ ಬೋರ್ಡ್ ಶಾಲಾ ಮೈದಾನದ ಬಳಿಯ ಒವರ್ ಹೆಡ್ ಟ್ಯಾಂಕ್ ನಲ್ಲಿ ರಾತ್ರಿ ಎಲ್ಲಾ ನೀರು ಹೊರ ಚೆಲ್ಲಿ ಬೃಹತ್ ಮೈದಾನದಲ್ಲಿ ಕೃತಕ ನೆರೆ ಸೃಷ್ಟಿಯಾಗುತ್ತಿದೆ. ಈ ಸಮಸ್ಯೆ ಇಂದು ನಿನ್ನೆಯದಲ್ಲ..ಈ ಹಿಂದೆಯೂ ಸುಮಾರು ಆರು ವರ್ಷಗಳ ಹಿಂದೆ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಪ್ರಾನ್ಸಿಸ್ ಸಾರ್ವಜನಿಕ ದೂರಿಗೆ ತುರ್ತಾಗಿ ಸ್ಪಂದಿಸಿ ಸ್ಥಳಕ್ಕೆ ಆಗಮಿಸಿ, ಪರಿಶೀಲಿಸಿ ಆಕ್ರೋಶಗೊಂಡ ಅವರು ಅಭಿವೃದ್ಧಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಕರ್ತವ್ಯದಲ್ಲಿ ಈ ರೀತಿ ನಿರ್ಲಕ್ಷ್ಯ ತೋರುವ ಸಿಬ್ಬಂದಿಯನ್ನು ತಕ್ಷಣವೇ ಕೆಲಸದಿಂದ ವಜಾಗೊಳಿಸುವಂತೆ ಆದೇಶಿಸಿದ್ದರು. ಆದರೆ ಆ ದಿನದಿಂದಲೂ ಸಿಬ್ಬಂದಿಯೂ ಬದಲಾಗಿಲ್ಲ, ಸಮಸ್ಯೆಗೂ ಪರಿಹಾರ ದೊರೆತಿಲ್ಲ ಎಂಬುದು ಗ್ರಾಮಸ್ಥರ ಅಳಲು.
ಎರಡು ದಿನಕ್ಕೊಮ್ಮೆ ಅದ್ರೂ ಕೂಡಾ ನಿಗದಿತ ಸಮಯವಷ್ಟೇ ನಳ್ಳಿ ನೀರು ಸರಬರಾಜು ಮಾಡುತ್ತಾರೆ ಕೇಳಿದರೆ ನೀರಿನ ಕೊರತೆ ಇದೆ ಎನ್ನುವ ಗ್ರಾಮ ಪಂಚಾಯಿತು, ಅದೆಷ್ಟೋ ವರ್ಷಗಳಿಂದ ನಡೆಯುತ್ತಿರುವ ಈ ಸಮಸ್ಯೆಗೆ ಮುಕ್ತಿ ನೀಡಲು ಹಿಂದೇಟು ಹಾಕುತ್ತಿದೆ ಏಕೆ ಎಂಬುದು ಉತ್ತರವೇ ಇಲ್ಲದ ಪ್ರಶ್ನೆಯಾಗಿದೆ ಎನ್ನುವ ಗ್ರಾಮಸ್ಥರು ಈ ಬಗ್ಗೆ ತಕ್ಷಣವೇ ಜಿಲ್ಲಾಧಿಕಾರಿಗಳು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ನೀರಿನ ಕೊಡ ಹಿಡಿದು ಗ್ರಾ.ಪಂ. ಮುಂಭಾಗ ಪ್ರತಿಭಟಿಸುವ ಎಚ್ಚರಿಕೆ ನೀಡಿದ್ದಾರೆ.