ಪುತ್ತೂರು: ಕಾಡು ರಕ್ಷಣೆಯಲ್ಲಿ ಅರಣ್ಯ ಇಲಾಖೆ ಸೇನಾನಿಗಳ ಕೊಡುಗೆ ಅಪಾರ: ಉಪ ಅರಣ್ಯ ಸಂರಕ್ಷಣಾಧಿಕಾರಿ ಅಂಥೋನಿ ಎಸ್ ಮರಿಯಪ್ಪ
ಪುತ್ತೂರು; ಮಾನವನ ಮೂಲಭೂತ ವ್ಯವಸ್ಥೆಗೆ ಪೂರಕವಾಗಿರುವ ಕಾಡು ರಕ್ಷಣೆಯಲ್ಲಿ ಅರಣ್ಯ ಇಲಾಖೆಯ ತಳಹಂತದ ಸೇನಾನಿಗಳು ಜೀವಪಣಕ್ಕಿಟ್ಟು ಕೆಲಸ ಮಾಡುತ್ತಿದ್ದಾರೆ. ಶೇ.೨೩ರಷ್ಟಿರುವ ಭೌಗೋಳಿಕಾ ಚೌಕಟ್ಟಿನಲ್ಲಿರುವ, ಎಲ್ಲದಕ್ಕೂ ಮೂಲವಾಗಿರುವ ಕಾಡನ್ನು ಕಾಪಾಡುವ ಜತೆಗೆ ಜೀವಜಗತ್ತಿನ ರಕ್ಷಣೆ ಮಾಡುತ್ತಿರುವ ಏಕೈಕ ಇಲಾಖೆ ಅರಣ್ಯ ಇಲಾಖೆ ಎಂದು ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಂಥೋನಿ ಎಸ್ ಮರಿಯಪ್ಪ ಅಭಿಪ್ರಾಯ ಪಟ್ಟರು.
ಕರ್ನಾಟಕ ರಾಜ್ಯ ಗಸ್ತು ಅರಣ್ಯಪಾಲಕರು ಮತ್ತು ಅರಣ್ಯವೀಕ್ಷಕರ ಸಂಘದ ಮಂಗಳೂರು ವಿಭಾಗ ಆಶ್ರಯದಲ್ಲಿ ಪುತ್ತೂರಿನ ಅಶ್ವಿನಿ ಸಭಾಂಗಣದಲ್ಲಿ ಶನಿವಾರ ನಡೆದ ದಿನಚರಿ ಬಿಡುಗಡೆ ಮತ್ತು ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯನ ಅಗತ್ಯತೆಗಳನ್ನು ಪೂರೈಕೆ ಮಾಡುವ ಕಾಡು ರಕ್ಷಣೆಗಾಗಿ ಗಸ್ತು ಅರಣ್ಯಪಾಲಕರು ಹಾಗೂ ಅರಣ್ಯವೀಕ್ಷಕರು ಕೆಲಸ ಮಾಡುತ್ತಿದ್ದಾರೆ. ಕಾಡಿನಲ್ಲಿ ನಮ್ಮ ಜೀವನದಿಗಳು ಹುಟ್ಟಿವೆ. ಕೃಷಿಗೆ ಕಾಡು ಪೂರಕ. ಅಂರ್ತಜಲ ಹೆಚ್ಚಿಸುವಲ್ಲಿ ಕಾಡಿನದ್ದು ಪ್ರಮುಖ ಪಾತ್ರವಿದೆ. ಅಂತಹ ಸ್ಥಿತಿಯಲ್ಲೂ ಜೀವನದಿಗಳಿದ್ದೂ ದಕ ಜಿಲ್ಲೆಯಲ್ಲಿ ಟ್ಯಾಂಕರ್ ನೀರಿಗೆ ಕಾಯಬೇಕಾದ ಸ್ಥಿತಿ ನಿರ್ಮಾಣವಾಗುತ್ತಿದೆ. ಕಾಡು ರಕ್ಷಣೆ ಕೇವಲ ಅರಣ್ಯ ಇಲಾಖೆಯ ಕರ್ತವ್ಯ ಮಾತ್ರವಲ್ಲ. ಜನತೆಯ ಜವಾಬ್ದಾರಿ ಎಂದು ಅವರು ಹೇಳಿದರು.
ಅರಣ್ಯ ಇಲಾಖೆಯ ಸಿಬಂದಿಗಳಿಗೆ ರೈಪಲ್ ತರಬೇತಿ ಅತೀ ಶೀಘ್ರದಲ್ಲಿಯೇ ನೀಡಲಾಗುವುದು. ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ವಸತಿ ಸಂಕೀರ್ಣಗಳನ್ನು ನಿರ್ಮಿಸಲು ಯೋಜನೆ ತಯಾರಾಗಿದೆ. ಮಂಗಳೂರು ವಿಭಾಗದಲ್ಲಿ ಒಟ್ಟು 10 ಸಂಕೀರ್ಣಗಳು ಫೆಬ್ರವರಿ ತಿಂಗಳೊಳಗೆ ನಿರ್ಮಾಣವಾಗಲಿವೆ. ನಿಸ್ವಾರ್ಥಸೇವೆ ನಡೆಸುವ ನೀವು ಪ್ರಶಂಸೆಗಾಗಿ ಕೆಲಸ ಮಾಡಬೇಡಿ. ನಿಮ್ಮ ಕರ್ತವ್ಯದ ವ್ಯಾಪ್ತಿಯಲ್ಲಿ ೧೦ ಕೊಳವೆಬಾವಿಗಳ ಅಂರ್ತಜಲ ಹೆಚ್ಚಿಸಿದರೂ ದೊಡ್ಡ ಸಾಧನೆ ಎಂದು ಅವರು ಹೇಳಿದರು.
ಇದೆ ಸಂದರ್ಭದಲ್ಲಿ ಅರಣ್ಯ ಇಲಾಖಾ ಕುಟುಂಬದ ದ್ವಿಥಿಯ ಪಿಯುಸಿಯಲ್ಲಿ ಶೇ95 ಅಂಕ ಪಡೆದ ಫಾತಿಮಾತ್ ಸಹನಾ, ವಿಜ್ಞಾನ ವಿಭಾಗದಲ್ಲಿ ಶೇ.86 ಅಂಕ ಪಡೆದ ಸಿಂಚನಾ ಅವರನ್ನು ಗೌರವಿಸಲಾಯಿತು. ಗಸ್ತು ಪಾಲಕನಾಗಿದ್ದು, ಸಾಹಿತ್ಯಕೃಷಿ ನಡೆಸುತ್ತಿರುವ ಪ್ರಸ್ತುತ ಪಿಎಚ್‌ಡಿ ಅಧ್ಯಯನ ನಡೆಸುತ್ತಿರುವ ಸೋಮನಿಂಗ ಪೊನ್ನಪ್ಪ ಹಿಪ್ಪರಿಗೆ ಅವರಿಗೆ ಸನ್ಮಾನ ಮಾಡಲಾಯಿತು.
ವೇದಿಕೆಯಲ್ಲಿ ಪುತ್ತೂರು ಉಪವಿಭಾಗದ ಸಹಾಯಕ ಅರಣ್ಯಸಂರಕ್ಷಣಾಧಿಕಾರಿ ಸುಬ್ಬಯ್ಯ,ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಭಾಗದ ಗಸ್ತು ಅರಣ್ಯಪಾಲಕರು ಮತ್ತು ಅರಣ್ಯವೀಕ್ಷಕರ ಸಂಘದ ಅಧ್ಯಕ್ಷರಾದ ಚಿದಾನಂದ ಬಿ ಪುತ್ತೂರು ವಲಯಾರಣ್ಯಧಿಕಾರಿ ಬಿ.ಎಮ್.ಕಿರಣ್, ಪಂಜ ವಲಯಾರಣ್ಯಾಧಿಕಾರಿ ಗಿರೀಶ್, ಸುಬ್ರಹ್ಮಣ್ಯ ವಲಯಾರಣ್ಯಾಧಿಕಾರಿ ವಿಮಲ್ ಬಾಬು, ಬಂಟ್ವಾಳ ವಲಯಾರಣ್ಯಾಧಿಕಾರಿ ಪ್ರಪುಲ್ ಶೆಟ್ಟಿ,ಜಗದೀಶ್ ಕೆ.ಎಸ್ ,ಭರಮಪ್ಪ ಎಚ್. ಬೆಳಗಲ್ಲ, ರಾಜೇಶ್ ಕೆ. ಉಪ್ಪಿನಂಗಡಿ ಮತ್ತಿತ್ತರರು ಉಪಸ್ಥಿತರಿದ್ದರು.